ಗುರುದೇವ ಶ್ರೀ ಶ್ರೀ ರವಿಶಂಕರ್ ಪಾಂಡವರ ತಾಯಿ ಕುಂತಿದೇವಿಯು ಒಮ್ಮೆ ಶ್ರೀಕೃಷ್ಣನನ್ನು ಕುರಿತು ಹೇಳುವ ಮಾತು ತುಂಬ ಪ್ರಸಿದ್ಧವಾಗಿದೆ. ‘ನನಗೆ ಇನ್ನೂ ಹೆಚ್ಚು ಕಷ್ಟಗಳು ಬರಲಿ ಎಂದು ಬಯಸುತ್ತೇನೆ. ಏಕೆಂದರೆ, ನನ್ನ ಎಲ್ಲ ಕಷ್ಟಗಳ ಕಾಲದಲ್ಲಿ ನೀನು ನನ್ನ ಬಳಿಯಲ್ಲಿರುತ್ತೀಯೆ. ನೀನು ಬಳಿಯಿರುವಾಗ ದೊರೆಯುವ ಸಂತೋಷಕ್ಕೆ ಯಾವ ಸಂತೋಷವೂ ಎಣೆಯಲ್ಲ. ನೀನು ಜೊತೆಯಿದ್ದರೆ ಎಂತಹ ದುಃಖವೂ ಸಹನೀಯವಾಗುತ್ತದೆ. ನೀನು ಜೊತೆಗಿರುವ ಒಂದು ಕ್ಷಣಕ್ಕಾಗಿ ಜಗತ್ತಿನ ಎಲ್ಲ ಸಂತೋಷಗಳನ್ನೂ ನಾನು ಬಿಟ್ಟುಬಿಡಬಲ್ಲೆ’ ಎಂಬುದೇ ಆ ಮಾತು.
ನಮ್ಮ ಮನಸ್ಸು ಮತ್ತು ಇಂದ್ರಿಯ ಗಳು ಹೆಚ್ಚು ಆಕರ್ಷಕವಾದುದರ ಕಡೆಗೆ ಹರಿಯುವ ಸಹಜ ಪ್ರವೃತ್ತಿ ಯನ್ನು ಹೊಂದಿವೆ. ಆದ್ದರಿಂದ ಯಾರಾದರೂ ನಮ್ಮನ್ನು ಕಣ್ಣಿಗೆ ಕಾಣಿಸುವ ಲೋಕದಿಂದ ಅದರ ಆಚೆಗಿನ ಅತೀಂದ್ರಿಯ ಲೋಕದೆಡೆಗೆ ಸೆಳೆಯಬೇಕಾದರೆ ಅವರು ಜಗತ್ತಿನಲ್ಲಿ ವ್ಯಕ್ತಿಯು ಅನುಭವಿಸುವ ಇಂದ್ರಿಯ ಸುಖಗಳಿಗಿಂತ ಹೆಚ್ಚು ಆಕರ್ಷಕವಾಗಿರಬೇಕು. ಕೃಷ್ಣನ ಆಕರ್ಷಣೆಯೇ ಅಂಥದ್ದು. ಅದು ಪ್ರತಿಯೊಬ್ಬರನ್ನು ಲೌಕಿಕ ವ್ಯವಹಾರಗಳಿಂದ ಅಲೌಕಿಕವಾದುದರೆಡೆಗೆ ಮುನ್ನಡೆಸುತ್ತದೆ. ಆ ರೀತಿ ಮುನ್ನಡೆಸಲು ಎಲ್ಲರನ್ನೂ ಸೆರೆಹಿಡಿಯಬಲ್ಲ ಬೇರೆಯೇ ಆದ ಪ್ರಭೆಯನ್ನು ಹೊಂದಿರಬೇಕಾಗುತ್ತದೆ.
ಪರಿಪೂರ್ಣಾವತಾರಿ: ಶ್ರೀಕೃಷ್ಣನ ಜ್ಞಾನ, ವಿನಯ, ಸೌಂದರ್ಯ ಮತ್ತು ಪ್ರೇಮ ಮಾನವ ಇತಿಹಾಸದಲ್ಲಿಯೇ ಅನುಪಮವಾಗಿ ಉಳಿದಿವೆ. ನೀವು ಯಾವುದೇ ದೃಷ್ಟಿಯಿಂದ ನೋಡಿದರೂ ಕೃಷ್ಣನ ವ್ಯಕ್ತಿತ್ವದಲ್ಲಿ ಪರಿಪೂರ್ಣತೆಯನ್ನು ನೋಡುತ್ತೀರಿ. ಅದು ಅವನಿಗೆ ವಿಶಿಷ್ಟವಾದುದು. ಕೃಷ್ಣನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಋಷಿಗಳು ಅವನನ್ನು ದೇವರ ಪರಿಪೂರ್ಣ ಅವತಾರ ಎಂದು ಕರೆದಿದ್ದಾರೆ. ಏಕೆಂದರೆ, ಮಾನವರಲ್ಲಿ ಇರಬಹುದಾದ ಎಲ್ಲವೂ ಕೃಷ್ಣನಲ್ಲಿವೆ; ಅವನು ಮಾನವ ಸಾಮರ್ಥ್ಯದ ಸಂಪೂರ್ಣ ವಿಕಾಸದ ಪ್ರತೀಕವಾಗಿದ್ದಾನೆ. ಸೂರ್ಯನ ಕಿರಣದಲ್ಲಿ ಎಲ್ಲ ಬಣ್ಣಗಳು ಅಡಗಿಕೊಂಡಿರುವಂತೆ ಎಲ್ಲ ಗುಣಗಳೂ ನಿಮ್ಮೊಳಗೆ ಅಡಕವಾಗಿವೆ ಎಂಬುದನ್ನು ಶ್ರೀಕೃಷ್ಣನ ಜೀವನ ಸೂಚಿಸುತ್ತದೆ. ಕೃಷ್ಣಜನ್ಮಾಷ್ಟಮಿಯು ಕೃಷ್ಣನ ವಿರಾಟ್ ಸ್ವರೂಪವನ್ನು ನಮ್ಮ ಪ್ರಜ್ಞೆಯಲ್ಲಿ ಸಚೇತನಗೊಳಿಸುವ ದಿನ. ದೈನಂದಿನ ಜೀವನದಲ್ಲಿ ನಿಮ್ಮ ನಿಜವಾದ ಪ್ರಕೃತಿ ಪ್ರಕಟವಾಗಲು ಅವಕಾಶ ನೀಡಿ ಎಂಬುದು ಕೃಷ್ಣನ ಜನನದ ನಿಜವಾದ ರಹಸ್ಯ.
ಕೃಷ್ಣನ ಆಕರ್ಷಣೆ ಎಷ್ಟು ಬಲವಾಗಿತ್ತೆಂದರೆ ಅತ್ಯಂತ ವಿರಕ್ತರಾದ ಋಷಿಗಳೂ ಅವನನ್ನು ಪ್ರೀತಿಸುತ್ತಿದ್ದರು, ಅವನಿಂದ ಆಕರ್ಷಿತರಾಗುತ್ತಿದ್ದರು. ಕೃಷ್ಣ ಎಂಬ ಶಬ್ದ ಆಕರ್ಷಕ, ಎಲ್ಲವನ್ನೂ ಸೆಳೆಯುವಂಥದ್ದು ಎಂಬ ಅರ್ಥವನ್ನು ಹೊಂದಿದೆ. ನಿಮ್ಮ ಅಸ್ತಿತ್ವದ ಮೂಲವೇ ಆತ್ಮಾನಂದ, ಆ ಆನಂದವೇ ಶ್ರೀಕೃಷ್ಣ. ಶ್ರೀಕೃಷ್ಣನ ಜನನದ ಸಾಂಕೇತಿಕತೆಯೂ ಗಮನಾರ್ಹ. ದೇವಕಿಯು ದೇಹದ ಸಂಕೇತ, ವಸುದೇವನು ಪ್ರಾಣ ಅಥವಾ ಉಸಿರಿನ ಸಂಕೇತ. ದೇಹ ಮತ್ತು ಪ್ರಾಣಗಳು ಜೊತೆಯಾಗಿ ಅಂತರಂಗದ ಆನಂದ, ಅಂದರೆ ಕೃಷ್ಣನಿಗೆ ಜನ್ಮ ನೀಡುತ್ತವೆ.