ನ್ಯೂಸ್

ಎಟಿಎಂ ಬಳಕೆದಾರರಿಗೆ ಶಾಕ್; ಮೇ 1 ರಿಂದ ವಿತ್‌ಡ್ರಾ ಶುಲ್ಕ 2 ರೂ. ಹೆಚ್ಚಳ! ATM

ATM | ಈಗಾಗಲೇ ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಇದೀಗ ಜನರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಎಟಿಎಂ ಉಚಿತ ವಹಿವಾಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಪ್ರಮುಖ ಬದಲಾವಣೆಗಳನ್ನು ಜಾರಿ ಮಾಡಿದ್ದು, ಮೇ 1 ರಿಂದ ಕೆಲ ಬದಲಾವಣೆಗಳನ್ನು ಜಾರಿಗೆ ತರಲು ಯೋಜನೆ ರೂಪಿಸಿಕೊಂಡಿದೆ. ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂಗಳನ್ನು ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರಿದಾಗ ಹೆಚ್ಚುವರಿ ಶುಲ್ಕಗಳನ್ನು (ಇಂಟರ್‌ಚೇಂಜ್) ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.

ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವುದರ ಮೇಲೆ ವಿಧಿಸಲಾಗುವ ಶುಲ್ಕವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಮೇ.1 ರಿಂದ 2 ರೂ. ಗೆ ಹೆಚ್ಚಿಸಲಾಗಿದೆ. ಎಟಿಎಂ ಸೇವೆಗಳನ್ನು ಒದಗಿಸಲು ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕವನ್ನು ಎಟಿಎಂ ಇಂಟರ್‌ಚೇಂಜ್ ಶುಲ್ಕ ಎನ್ನಲಾಗುತ್ತದೆ. ಪ್ರತಿ ವಹಿವಾಟಿಗೆ ಇಂತಿಷ್ಟು ಮೊತ್ತ ಎಂದು ನಿಗದಿಪಡಿಸಲಾಗಿರುತ್ತದೆ.

ಮೊದಲಿಗೆ ಕ್ರಾಂತಿಕಾರಿ ಬ್ಯಾಂಕಿಂಗ್ ಸೇವೆ ಎಂದು ಪರಿಗಣಿಸಲಾಗಿದ್ದ ಈ ಎಟಿಎಂಗಳು, ಡಿಜಿಟಲ್ ಪಾವತಿಗಳ ಏರಿಕೆಯಿಂದಾಗಿ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ಗ್ರಾಹಕರ ವ್ಯವಹಾರದಿಂದ ಹೆಚ್ಚುತ್ತಿರುವ ವೆಚ್ಚಗಳು ತಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ವೈಟ್-ಲೇಬಲ್ ಎಟಿಎಂ ಆಪರೇಟರ್‌ಗಳು ಆರ್​ಬಿಐಗೆ ಮನವಿ ಸಲ್ಲಿಸಿದ್ದರು. ಇದನ್ನು ಸಂಕ್ಷಿಪ್ತವಾಗಿ ಅರಿತ ಆರ್‌ಬಿಐ ಈ ಶುಲ್ಕಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ. ಹಾಗಾಗಿ ಮೇ 1ರಿಂದ ಎಟಿಎಂ ವಿತ್‌ಡ್ರಾ ದುಬಾರಿಯಾಗಲಿದ್ದು, ಆರ್‌ಬಿಐ ಶುಲ್ಕ ಹೆಚ್ಚಳಕ್ಕೆ ಅನುಮೋದನೆಯನ್ನು ನೀಡಿದೆ. ಇನ್ನೂ ಈ ಶುಲ್ಕ ಹೆಚ್ಚಳದ ನಿಯಮ ದೇಶದಾದ್ಯಂತ ಅನ್ವಯವಾಗಲಿದ್ದು, ವಿಶೇಷವಾಗಿ ಸಣ್ಣ ಬ್ಯಾಂಕ್‌ಗಳ ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಾಗಾಗಿ ಮೇ 1ರಿಂದ ಗ್ರಾಹಕರು ತಮ್ಮ ಉಚಿತ ಮಿತಿಯನ್ನು ಮೀರಿದ ಪ್ರತಿ ಹಣಕಾಸು ವಹಿವಾಟಿಗೆ ಹೆಚ್ಚುವರಿಯಾಗಿ 2 ರೂಪಾಯಿ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ. ಒಂದು ತಿಂಗಳಿಗೆ ಎಟಿಎಂನಿಂದ 5 ಬಾರಿ ಉಚಿತವಾಗಿ ಹಣವನ್ನು ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಲು ಹೋದರೆ 21 ರೂ.ಗಳನ್ನು ಕಡಿತಗೊಳಿಸಲಾಗುತ್ತಿತ್ತು. ಆದರೆ ಹೊಸ ನಿಯಮದಿಂದಾಗಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಪ್ರತಿ ವಹಿವಾಟಿಗೆ 23 ರೂಪಾಯಿ ವೆಚ್ಚವಾಗಲಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.