ನವದೆಹಲಿ: ನಗದನ್ನು ತೆಗೆದುಕೊಂಡಾಗ ನೋಟು ವಿರೂಪಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರತಿಯೊಬ್ಬರೂ ಪರಿಶೀಲಿಸುತ್ತಾರೆ. ಆದರೆ ಈಗ ಬಹುತೇಕ ಮಂದಿ ಎಟಿಎಂ ಯಂತ್ರಗಳಿಂದ ಹಣ ತೆಗೆಯುವುದರಿಂದ ಅದರಲ್ಲಿ ವಿಕೃತ ನೋಟು ಕಂಡುಬಂದರೆ ಏನು ಮಾಡಬೇಕು ಎಂಬ ಪ್ರಶ್ನೆ ಕಾಡುತ್ತದೆ. ಇದಕ್ಕೆ ಆರ್ ಬಿಐ ಉತ್ತರ ನೀಡಿದೆ.
ಹಾನಿಗೊಳಗಾದ ಅಥವಾ ಹರಿದ ನೋಟುಗಳನ್ನು ಬದಲಾಯಿಸಬಹುದೇ ಅಥವಾ ಇಲ್ಲವೇ? ಈ ಪ್ರಶ್ನೆಗೆ ಸ್ವತಃ ಕೇಂದ್ರೀಯ ಬ್ಯಾಂಕ್ ( RBI ) ಉತ್ತರ ನೀಡಿದೆ . ವಿಕೃತ ನೋಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳನ್ನು ಹೊರಡಿಸಿದೆ.
ಆರ್‌ಬಿಐ ನಿಯಮಗಳ ಪ್ರಕಾರ ವಿಕೃತ ನೋಟುಗಳನ್ನು ಬ್ಯಾಂಕ್ ಅಥವಾ ಆರ್ ಬಿಐ ಕಚೇರಿಗೆ ತೆರಳಿ ಸುಲಭವಾಗಿ ಬದಲಾಯಿಸಿಕೊಳ್ಳಬಹುದು. ಆದಾಗ್ಯೂ, ಆರ್‌ಬಿಐ ನೋಟು ವಿನಿಮಯಕ್ಕೆ ಕೆಲವು ಮಾರ್ಗಸೂಚಿಗಳನ್ನು ಸಹ ಹೊಂದಿದೆ.
ಎಟಿಎಂನಿಂದ ಬಂದ ಹರಿದ ನೋಟುಗಳನ್ನು ಸುಲಭವಾಗಿ ಬದಲಾಯಿಸಬಹುದು. ಇನ್ನು ವಿಕೃತ ನೋಟುಗಳನ್ನು ಸಹ ಸುಲಭವಾಗಿ ಬದಲಾಯಿಸಬಹುದು. ಯಾವ ಎಟಿಎಂನಿಂದ ಈ ನೋಟು ಪಡೆಯಲಾಗಿದೆಯೋ ಅದೇ ಬ್ಯಾಂಕ್‌ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು. ಅದರಲ್ಲಿ ನೋಟು ಪಡೆದ ದಿನಾಂಕ, ಸಮಯದ ಬಗ್ಗೆ ಮಾಹಿತಿ ನೀಡಬೇಕು. ಇದಲ್ಲದೆ, ಎಟಿಎಂ ಯಂತ್ರದ ಸ್ಥಳ ಮತ್ತು ವಿಳಾಸದ ಬಗ್ಗೆಯೂ ಮಾಹಿತಿ ಒದಗಿಸಬೇಕಾಗುತ್ತದೆ. ಇಷ್ಟೆಲ್ಲ ಮಾಹಿತಿ ನೀಡಿದ ಬಳಿಕ ಎಟಿಎಂನಿಂದ ನೀಡಿರುವ ಚೀಟಿಯನ್ನೂ ಲಗತ್ತಿಸಬೇಕು. ಅಷ್ಟೇ ಅಲ್ಲ, ಅರ್ಜಿ ಮತ್ತು ನೋಟುಗಳನ್ನೂ ಸಲ್ಲಿಸಿದ ನಂತರ ಬ್ಯಾಂಕ್ ಅದೇ ಮೌಲ್ಯದ ಇನ್ನೊಂದು ನೋಟು ನೀಡುತ್ತದೆ.
ಆರ್‌ಬಿಐ ನಿಯಮಗಳ ಪ್ರಕಾರ, ನಿಯಮಿತ ಬಳಕೆಯಿಂದ ಹಾಳಾದ ನೋಟನ್ನು ಮಾತ್ರ ಪರಿಗಣಿಸಲಾಗುತ್ತದೆ. ನೋಟು ಎರಡು ತುಂಡಾಗಿದ್ದರೂ ಅದರ ಮೇಲೆ ಬರೆದಿರುವ ಪ್ರಮುಖ ಮಾಹಿತಿ ಹಾಳಾಗದೇ ಅಥವಾ ಕಾಣೆಯಾಗದಿದ್ದರೆ ಗ್ರಾಹಕರು ಸುಲಭವಾಗಿ ಸರ್ಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್, ಆರ್ ಬಿಐ ಕಚೇರಿಗೆ ತೆರಳಿ ವಿನಿಮಯ ಮಾಡಿಕೊಳ್ಳಬಹುದು. ಈ ಎಲ್ಲಾ ಸ್ಥಳಗಳಲ್ಲಿ ನೋಟು ವಿನಿಮಯಕ್ಕಾಗಿ ಅವರು ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ.
ಇನ್ನು ಆರ್‌ಬಿಐ ಕೆಲವು ಸಂದರ್ಭಗಳಲ್ಲಿ ನೋಟುಗಳನ್ನು ಬದಲಾಯಿಸುವುದಿಲ್ಲ ಎಂದು ಹೇಳಿದೆ. ನೋಟು ಶೇ.50ಕ್ಕಿಂತ ಹೆಚ್ಚು ಹಾನಿಯಾಗಿದ್ದರೆ ಅದನ್ನು ಬದಲಾಯಿಸುವುದಿಲ್ಲ. ಇದಲ್ಲದೇ ನೋಟು ಸುಟ್ಟರೂ, ತುಂಡು ತುಂಡಾದರೂ ಬದಲಾಗುವುದಿಲ್ಲ. ಅದೇ ಸಮಯದಲ್ಲಿ, ಪ್ರತಿ ನೋಟಿನ ಮೇಲೆ ಇರುವ ಸಂಖ್ಯೆ ಮತ್ತು ಗಾಂಧೀಜಿ ಅವರ ವಾಟರ್‌ಮಾರ್ಕ್ ಸ್ಪಷ್ಟವಾಗಿಲ್ಲದಿದ್ದರೂ, ನೋಟು ಬದಲಾಗುವುದಿಲ್ಲ.