ನ್ಯೂಸ್

ಉಮೇಶ್ ಪಾಲ್ ಅಪಹರಣ ಪ್ರಕರಣ | ಅತೀಕ್ ಅಹ್ಮದ್‌ಗೆ ಜೀವಾವಧಿ ಶಿಕ್ಷೆ; ಪ್ರಯಾಗರಾಜ್‌ ನ್ಯಾಯಾಲಯದಿಂದ ತೀರ್ಪು

ಉತ್ತರ ಪ್ರದೇಶ: ಉಮೇಶ್‌ ಪಾಲ್‌ ಅಪಹರಣ ಪ್ರಕರಣದಲ್ಲಿ ಗ್ಯಾಂಗ್​​ಸ್ಟರ್ ಅತೀಕ್‌ ಅಹ್ಮದ್‌ ದೋಷಿ ಎಂದು ಪ್ರಯಾಗರಾಜ್‌ ನ್ಯಾಯಾಲಯ ತೀರ್ಪು ನೀಡಿದೆ. ಅಪರಾಧಿ ಅತೀಕ್ ಅಹ್ಮದ್​​ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಪ್ರಕರಣದಲ್ಲಿ ಅತೀಕ್ ಅಹ್ಮದ್ ಸಹೋದರ ಖಾಲಿದ್ ಅಜೀಂ ಸೇರಿದಂತೆ ಏಳು ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಲಾಗಿದೆ. ನ್ಯಾಯಾಲಯವು ಅತೀಕ್ ಅಹ್ಮದ್, ದಿನೇಶ್ ಪಾಸಿ ಮತ್ತು ಖಾನ್ ಸೌಲತ್ ಹನೀಫ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

2006 ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದ ವಿಚಾರಣೆಗೆ ಮುಂಚಿತವಾಗಿ, ಅತಿಕ್​ ಅಹ್ಮದ್​ನನ್ನು ಗುಜರಾತ್‌ನ ಸಾಬರಮತಿ ಜೈಲಿನಿಂದ ಬಿಗಿ ಭದ್ರತೆಯ ಮೂಲಕ ಪ್ರಯಾಗ್‌ರಾಜ್‌ನಲ್ಲಿರುವ ನೈನಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.

ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತಿಕ್ ಅಹ್ಮದ್​ಗೆ ಮತ್ತೊಂದು ಹಿನ್ನೆಡೆಯಾಗಿದ್ದು, ಉತ್ತರ ಪ್ರದೇಶ ಪೊಲೀಸರ ಕಸ್ಟಡಿಯಲ್ಲಿ ರಕ್ಷಣೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ತನ್ನ ಮತ್ತು ತನ್ನ ಕುಟುಂಬ ಸದಸ್ಯರ ಜೀವಕ್ಕೆ ಬೆದರಿಕೆ ಇದೆ ಎಂದು ಅಹ್ಮದ್ ಹೇಳಿಕೊಂಡಿದ್ದ. (ಏಜೆನ್ಸೀಸ್)