ಚಿಕ್ಕೋಡಿ: ಮಾರಕ ಕರೊನಾ ಸೋಂಕಿನ ಚಿಕಿತ್ಸೆಗಾಗಿ ವಿಶ್ವದಾದ್ಯಂತ ಲಸಿಕೆ ಕಂಡುಹಿಡಿಯುವ ಪ್ರಯೋಗಗಳು ಭರದಿಂದ ಸಾಗುತ್ತಿವೆ. ಈ ನಡುವೆ ಆಯುರ್ವೇದದಲ್ಲೂ ನಾಲ್ಕು ಔಷಧಗಳ ಪ್ರಾಯೋಗಿಕ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ನಡುವೆ ಚಿಕ್ಕೋಡಿಯ ಅಥಣಿ ವೈದ್ಯರೊಬ್ಬರು ತಮ್ಮದೇ ಆದ ಔಷಧವನ್ನು ಕಂಡುಹಿಡಿದಿದ್ದಾರೆ. ಅಲ್ಲದೆ, ತಮ್ಮ ಮನೆಯವರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.
ಡಾ. ರಮೇಶ್ ಗುಳ್ಳ ಈ ಪ್ರಯೋಗ ಮಾಡಿರುವ ವೈದ್ಯ. ಇವರ ಪ್ರಕಾರ ರುಬೊಲಾ ಚಿಕಿತ್ಸೆಗೆ ಬಳಸುವ ಚುಚ್ಚುಮದ್ದನ್ನು ತೆಗೆದುಕೊಂಡರೆ ಕರೊನಾ ಸೋಂಕಿನ ಆತಂಕದಿಂದ ಪಾರಾಗಬಹುದು ಎಂದು ಪ್ರತಿಪಾದಿಸಿದ್ದಾರೆ.
ಮುಂಬೈಯಲ್ಲಿ ಕ್ಯಾನ್ಸರ್ ವೈದ್ಯರಾಗಿ ಸೇವೆ ಸಲ್ಲಿಸಿರುವ ಡಾ. ರಮೇಶ್ ಗುಳ್ಳ, ಪ್ರಕಾರ ಎಂಆರ್ಎಂಎಂಆರ್ ಚುಚ್ಚುಮದ್ದನ್ನು ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಂಡರೆ ಕರೊನಾ ಸೋಂಕು ತಗಲುವ ಭಯವೇ ಇರುವುದಿಲ್ಲವಂತೆ.
ಈ ಚುಚ್ಚುಮದ್ದನ್ನು ತಮ್ಮ ಮನೆಯವರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿರುವುದಾಗಿ ಹೇಳಿಕೊಂಡಿರುವ ಅವರು, ಕೇವಲ 150 ರೂ. ವೆಚ್ಚದಲ್ಲಿ ಈ ಚಿಕಿತ್ಸೆ ಲಭ್ಯ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಔಷಧ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಯಥೇಚ್ಚವಾಗಿ ಲಭ್ಯ ಇರುವುದಾಗಿ ಹೇಳಿದ್ದಾರೆ.