ನ್ಯೂಸ್

ಹೈಟೆಕ್ ಪ್ರಯೋಗಶಾಲೆ: ಎಲಿಮಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ವೈಜ್ಞಾನಿಕ ತಂತ್ರಜ್ಞಾನ

ರತ್ನಾಕರ ಸುಬ್ರಹ್ಮಣ್ಯ
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ವಿಜ್ಞಾನ ತಂತ್ರಜ್ಞಾನ ಅಭ್ಯುದಯಕ್ಕೆ ವಾತಾವರಣ ಸೃಷ್ಟಿಸಲು ಎಲಿಮಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎರಡು ಹೈಟೆಕ್ ಪ್ರಯೋಗಶಾಲೆ ಸಿದ್ಧಗೊಂಡಿದೆ. ಅಟಲ್ ಟಿಂಕರಿಂಗ್ ಲ್ಯಾಬ್ ಮತ್ತು ರಾಜ್ಯ ಸರ್ಕಾರದ ಯೋಜನೆಯ ಗಣಕಯಂತ್ರ ಪ್ರಯೋಗಾಲಯ ನಿರ್ಮಾಣಗೊಂಡಿದೆ.

ಸರ್ಕಾರದ ಅಟಲ್ ಇನ್ನೋವೇಶನ್ ಮಿಷನ್ ಮೂಲಕ ಶಾಲೆಗಳಲ್ಲಿ ತಂತ್ರಜ್ಞಾನದ ಆವಿಷ್ಕಾರಗಳನ್ನು ಪರಿಚಯಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ವಿನೂತನ ಮನಸ್ಥಿತಿಯನ್ನು ಬೆಳೆಸಲು ಆಯ್ಕೆಯಾದ ಪ್ರೌಢಶಾಲೆಗಳಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಯುವ ಮನಸ್ಸುಗಳಿಗೆ ನವೀನ ಕೌಶಲಗಳನ್ನು ಕಲಿಸಲು, ಸೂಕ್ತವಾದ ಕಾರ‌್ಯಕ್ಷೇತ್ರಗಳನ್ನು ರಚಿಸಲು, ಚಟುವಟಿಕೆಗಳ ಮೂಲಕ ಆಲೋಚನೆಗಳನ್ನು ಅಭಿವೃದ್ಧಿಪಡಿಸಲು ಈ ಪ್ರಯೋಗಾಲಯ ಸಹಕಾರಿಯಾಗಲಿದೆ. ಇದರ ಮೊದಲ ಭಾಗವಾಗಿ ಉಪಕರಣಗಳಿಗೆ ಹಾಗೂ ಲ್ಯಾಬ್ ರಚನೆಗೆ 10 ಲಕ್ಷ ರೂ. ಬಿಡುಗಡೆಗೊಂಡಿದೆ. ಉಳಿದ 10 ಲಕ್ಷ ರೂ.ಗಳಲ್ಲಿ 2 ಲಕ್ಷದಂತೆ ಪ್ರತಿ ವರ್ಷ 5 ವರ್ಷಗಳಿಗೆ ನಿರ್ವಹಣಾ ವೆಚ್ಚಕ್ಕೆ ಅನುದಾನ ನೀಡಲಾಗುತ್ತದೆ.
 
ಸೃಜನಶೀಲತೆ ವೃದ್ಧಿಗೆ ಸೂತ್ರ : ಎಟಿಲ್ ಎಂಬುದು ಒಂದು ಕಾರ‌್ಯ ಕ್ಷೇತ್ರವಾಗಿದ್ದು, ಇದು ಯುವ ಮನಸ್ಸುಗಳು ತಮ್ಮ ಆಲೋಚನೆಗಳನ್ನು ಡು-ಇಟ್ ಮೂಲಕ ರೂಪಿಸಲು ಅನುವು ಮಾಡಿಕೊಡುತ್ತದೆ. ಚಿಕ್ಕ ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ಉಪಕರಣಗಳು ಮತ್ತು ಸಲಕರಣೆಗಳೊಂದಿಗೆ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಉತ್ತೇಜಿಸಲು ಪ್ರಾದೇಶಿಕ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆ, ಪ್ರದರ್ಶನ, ಉಪನ್ಯಾಸ ಸರಣಿ ಏರ್ಪಡಿಸಲು ಪ್ರಯೋಗಾಲಯ ಅನುವು ಮಾಡಿಕೊಡುತ್ತದೆ.
 
ಹೈಟೆಕ್ ಗಣಕಯಂತ್ರ ಪ್ರಯೋಗಾಲಯ: ರಾಜ್ಯ ಸರ್ಕಾರದ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮದಲ್ಲಿ ಎಲಿಮಲೆ ಪ್ರೌಢಶಾಲೆಗೆ 10 ಕಂಪ್ಯೂಟರ್‌ಗಳನ್ನು ನೀಡಿದ್ದು, ಇದರ ಮೂಲಕ ಶಿಕ್ಷಕರು ತಂತ್ರಜ್ಞಾನವನ್ನು ಬಳಸಿ ಕಲಿಸಲು ಹಾಗೂ ಸ್ವತಃ ವಿದ್ಯಾರ್ಥಿಗಳು ಕಂಪ್ಯೂಟರ್ ಬಗ್ಗೆ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಲಿದೆ.
 
 ಎಲಿಮಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಮೂಡಿಸಲು ಕ್ರಮವಹಿಸಿ ಅಟಲ್ ಟಿಂಕರಿಂಗ್ ಲ್ಯಾಬ್ ಹಾಗೂ ಕಂಪ್ಯೂಟರ್ ಲ್ಯಾಬ್‌ಗಳನ್ನು ಅತ್ಯಾಧುನಿಕವಾಗಿ ಎಲ್ಲರ ಸಹಕಾರ ಪಡೆದು ನಿರ್ಮಾಣ ಮಾಡಲಾಗಿದೆ. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ವಿಶೇಷ ಲಾಭವಾಗಲಿದೆ.
-ಚಂದ್ರಶೇಖರ ಪೇರಾಲ್, ಮುಖ್ಯಶಿಕ್ಷಕರು