ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ (ಡಬ್ಲ್ಯುಟಿಸಿ) ಪ್ರತಿ ಸರಣಿಯಲ್ಲಿ ಕನಿಷ್ಠ 3 ಪಂದ್ಯಗಳು ಇರಬೇಕು ಮತ್ತು ಹೆಚ್ಚಿನ ಅಹರ್ನಿಶಿ ಟೆಸ್ಟ್ ಪಂದ್ಯಗಳನ್ನು ಆಯೋಜಿಸಬೇಕು ಎಂದು ಐಸಿಸಿ ಕ್ರಿಕೆಟ್ ಸಮಿತಿ ಶಿಫಾರಸು ಮಾಡಿದೆ. ಜತೆಗೆ ಏಕದಿನ ಕ್ರಿಕೆಟ್ನಲ್ಲಿ ಮೊದಲ 25 ಓವರ್ಗಳಿಗೆ ಮಾತ್ರ ಎರಡು ಚೆಂಡು ಇರಬೇಕು. ನಂತರದಲ್ಲಿ ಒಂದೇ ಚೆಂಡು ಬಳಸಬೇಕು ಎಂದೂ ಶಿಫಾರಸು ಮಾಡಲಾಗಿದೆ.
ಐಸಿಸಿ ಕ್ರಿಕೆಟ್ ಸಮಿತಿ ಇತ್ತೀಚೆಗೆ ದುಬೈನಲ್ಲಿ ಸಭೆ ನಡೆಸಿದ್ದು, ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲು ಅಹರ್ನಿಶಿ ಟೆಸ್ಟ್ಗಳನ್ನು ಹೆಚ್ಚಾಗಿ ಆಯೋಜಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಡಬ್ಲ್ಯುಟಿಸಿಯ ಮುಂದಿನ ಆವೃತ್ತಿಯ (2025-27) ಪ್ರತಿ ಸರಣಿಯಲ್ಲಿ ಕನಿಷ್ಠ 3 ಟೆಸ್ಟ್ ಇರಬೇಕು. ದ. ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾದಂಥ ತಂಡಗಳು 2 ಪಂದ್ಯಗಳ ಟೆಸ್ಟ್ ಸರಣಿಯನ್ನಷ್ಟೇ ಆಡುತ್ತಿವೆ. ಭಾರತ, ಇಂಗ್ಲೆಂಡ್, ಆಸ್ಟ್ರೆಲಿಯಾ ಮಾತ್ರ ಹೆಚ್ಚಿನ ಸುದೀರ್ ಟೆಸ್ಟ್ ಸರಣಿ ಆಡುತ್ತಿವೆ. ಇದು ಟೆಸ್ಟ್ ಕ್ರಿಕೆಟ್ ಬೆಳವಣಿಗೆಗೆ ಪೂರಕವಾಗಿಲ್ಲ. ಇದರಿಂದ ಅಸಮಾನತೆ ಹೆಚ್ಚುತ್ತದೆ ಸಮಿತಿ ಅಭಿಪ್ರಾಯಪಟ್ಟಿದೆ.
ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಮಹೇಲ ಜಯವರ್ಧನೆ, ವಿವಿಎಸ್ ಲಕ್ಷ$್ಮಣ್, ಶಾನ್ ಪೊಲ್ಲಾಕ್, ಡೇನಿಯಲ್ ವೆಟ್ಟೋರಿ, ರೋಜರ್ ಹಾರ್ಪರ್ ಜತೆಗೆ ಬಿಸಿಸಿಐ ಕಾರ್ಯದರ್ಶಿ ಹಾಗೂ ಐಸಿಸಿಯ ಮುಂದಿನ ಚೇರ್ಮನ್ ಜಯ್ ಷಾ ಅವರನ್ನೂ ಒಳಗೊಂಡಿದೆ.
ಕ್ರಿಕೆಟ್ ಆಸ್ಟ್ರೆಲಿಯಾ ಮಾತ್ರ ಪಿಂಕ್ ಬಾಲ್ ಟೆಸ್ಟ್ಗಳನ್ನು ಹೆಚ್ಚಾಗಿ ನಡೆಸುತ್ತ ಬಂದಿದ್ದು, ಬಿಸಿಸಿಐ ಕಳೆದ 2 ವರ್ಷಗಳಿಂದ ಅಹರ್ನಿಶಿ ಟೆಸ್ಟ್ ಬಗ್ಗೆ ಅಸಡ್ಡೆ ತೋರಿದೆ.
ಚೇರ್ಮನ್ ಅವಧಿ 3 ವರ್ಷಗಳಿಗೆ ವಿಸ್ತರಣೆ: ಐಸಿಸಿಯ ಚೇರ್ಮನ್ ಹುದ್ದೆಯ ಅವಧಿಯನ್ನು 3 ವರ್ಷಗಳಿಗೆ ವಿಸ್ತರಿಸಲು ಐಸಿಸಿ ಮಂಡಳಿ ನಿರ್ಧರಿಸಿದೆ. ಇದರಿಂದ ಮುಂಬರುವ ಚೇರ್ಮನ್ಗೆ ತಲಾ 2 ವರ್ಷಗಳ 3 ಅವಧಿಯ ಬದಲಾಗಿ 3 ವರ್ಷಗಳ 2 ಅವಧಿಯ ಮಿತಿ ವಿಧಿಸಲಾಗುತ್ತದೆ. ಇದರಿಂದ ಜಯ್ ಷಾ ಡಿಸೆಂಬರ್ 1ರಂದು ಐಸಿಸಿ ಚೇರ್ಮನ್ ಹುದ್ದೆಗೇರಿದ ನಂತರ 2027ರವರೆಗೂ ಮುಂದುವರಿಯಬಹುದಾಗಿದೆ.