ನ್ಯೂಸ್

ಧಾವಂತ ತಂದಿಟ್ಟ ಆಪತ್ತು: ಪ್ರಾಣ ಕಳೆದುಕೊಂಡ 116 ವಲಸೆ ಕಾರ್ಮಿಕರು!

ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ, ತಮ್ಮ ಊರುಗಳಿಗೆ ಹೋಗುವ ತರಾತುರಿಯಲ್ಲಿ ಈ 15 ದಿನಗಳಲ್ಲಿ ಒಟ್ಟು 116 ಮಂದಿ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಸರ್ಕಾರ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸುವ ಸಿದ್ಧತೆ ನಡೆಸುತ್ತಿರುವುದಕ್ಕಿಂತ ಮುಂಚೆಯೇ ಊರನ್ನು ಸೇರುವ ಧಾವಂತದಲ್ಲಿ ಕೆಲವರು ಮೃತಪಟ್ಟಿದ್ದಾರೆ. ಆದರೆ ಸರ್ಕಾರ ಶ್ರಮಿಕ್​ ರೈಲಿನ ವ್ಯವಸ್ಥೆಯ ನಂತರವೂ ಸಾವಿನ ಸರಣಿ ಮುಂದುವರೆದಿದ್ದು, 116 ಮಂದಿ ಪ್ರಾಣ ಕೆಳದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇವರ ಪೈಕಿ ಕೆಲವರು ರೈಲು ಸೇವೆಯ ಹೊರತಾಗಿಯೂ ನಡೆದು ಊರನ್ನು ಸೇರಲು ಬಯಸಿದವರಾಗಿದ್ದರೆ, ಇನ್ನು ಕೆಲವರು ಟ್ರಕ್​, ಲಾರಿ ಇತ್ಯಾದಿಗಳಲ್ಲಿ ಊರಿಗೆ ತಲುಪುವ ಸಮಯದಲ್ಲಿ ರಸ್ತೆ ಅಪಘಾತ ಹಾಗೂ ಮತ್ತೆ ಕೆಲವರು ರೈಲು ಅಪಘಾತಕ್ಕೆ ಸಿಲುಕಿದವರಾಗಿದ್ದಾರೆ. ಇವರ ಪೈಕಿ ಹೆಚ್ಚಿನವರು ರಾಜಸ್ಥಾನ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರದ ಕಾರ್ಮಿಕರಾಗಿದ್ದಾರೆ.

ವಲಸೆ ಕಾರ್ಮಿಕರಿಗೆ ಸರ್ಕಾರ ಮೇ 1 ರಿಂದ 16ರವರೆಗೆ 'ಶ್ರಮಿಕ ರೈಲು' ಆರಂಭಿಸಿದೆ. ಅದರ ನಂತರವೂ ಘಟನೆ ಒಂದರ ಮೇಲೊಂದರಂತೆ ಘಟನೆ ಸಂಭವಿಸಿದೆ.

ನಿನ್ನೆ (ಮೇ 16) ಉತ್ತರಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ 24 ಮಂದಿ ಮೃತಪಟ್ಟು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲಾ ಲಾರಿಯಲ್ಲಿ ತೆರಳುತ್ತಿದ್ದರು. ಎದುರು ಬಂದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಹರಿಯಾಣದಿಂದ ಬಿಹಾರಕ್ಕೆ ತೆರಳುತ್ತಿದ್ದ ದಂಪತಿ ಆಗ್ರಾದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದರೆ, ಟ್ರಕ್​ನಲ್ಲಿದ್ದ ಆರು ಮಂದಿಯ ಜೀವವೂ ಹೋಗಿದೆ. ಘಟನೆಯಲ್ಲಿ 15 ಮಂದಿ ಗಾಯಗೊಂಡರು.

ಮೇ 7ರಂದು 16 ಮಂದಿ ರೈಲು ಹಳಿಗಳ ಮೇಲೆ ನಿದ್ರಿಸುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಔರಂಗಾಬಾದ್ ಸಮೀಪ ರೈಲು ಹರಿದು ಮೃತಪಟ್ಟಿದ್ದಾರೆ. ಈ ವಲಸೆ ಕಾರ್ಮಿಕರು ಮಧ್ಯಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದರು. ವಲಸೆ ಕಾರ್ಮಿಕರು ದಣಿದು ನಿದ್ರಿಸುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

ಮೇ 13ರಂದು ಪಂಜಾಬಿನಿಂದ ಕೆಲಸ ಮುಗಿಸಿ ಬರುತ್ತಿದ್ದ ಆರು ಮಂದಿ ವಲಸೆ ಕಾರ್ಮಿಕರಿಗೆ ಬಿಹಾರದ ಗೋಪಾಲಗಂಜ್ ಸಮೀಪ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಮಂದಿ ಗಾಯಗೊಂಡರು. ಮೇ 10 ರಂದು ಹೈದರಾಬಾದಿನಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದಾಗ ಮಧ್ಯಪ್ರದೇಶದ ನರಸಿಂಗಾಪುರದ ಸಮೀಪ ಮಾವಿನಕಾಯಿ ತುಂಬಿದ ಲಾರಿ ಟ್ರಕ್ ಡಿಕ್ಕಿ ಹೊಡೆದು ಐವರು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.

ಹೀಗೆ ಮೇ 1ರಿಂದ ಇಲ್ಲಿಯವರೆಗೆ 116 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಯಾವುದೇ ವಲಸೆ ಕಾರ್ಮಿಕರು ರಸ್ತೆಯಲ್ಲಿ ನಡೆದು ಬರುತ್ತಿದ್ದರೆ ಅದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂದೇ ಪರಿಗಣಿಸಲಾಗುವುದು. ರೈಲು ಹಳಿಗಳ ಮೇಲೆ ನಡೆಯುವುದು, ಮಲಗುವುದು ಕಂಡು ಬಂದರೆ ಆಯಾ ಸರ್ಕಾರಗಳು ಅಂಥ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.

ಮೇ 16 ರಂದು ರಾಷ್ಟ್ರೀಯ ವಲಸೆ ಮಾಹಿತಿ ವ್ಯವಸ್ಥೆಯಲ್ಲಿ ಗೃಹ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಈವರೆಗೆ 350 ವಿಶೇಷ ರೈಲುಗಳಲ್ಲಿ 3.5 ಲಕ್ಷ ವಲಸೆ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ, ಇನ್ನೂ ಹೆಚ್ಚಿನ ರೈಲುಗಳನ್ನು ನಿಯೋಜಿಸಲಾಗಿದೆ ಎಂದಿದೆ. (ಏಜೆನ್ಸೀಸ್​)