ಸಂಭಾಲ್: ಸತತ ಒಂದು ತಿಂಗಳಿನಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದ ಹೋರಾಟಗಾರರಿಗೆ ಉತ್ತರ ಪ್ರದೇಶದ ಸಾಂಭಾಲ್ ಜಿಲ್ಲಾಡಳಿತ ಬಿಗ್ ಶಾಕ್ ನೀಡಿದೆ. ಹನ್ನೊಂದು ತೀವ್ರ ಹೋರಾಟಗಾರರನ್ನು ಗುರುತಿಸಲಾಗಿದ್ದು, ಅವರಿಗೆ 50 ಲಕ್ಷ ಬೆಲೆಯ ಬಾಂಡ್ಗೆ ಸಹಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗಿನಿಂದ ಉತ್ತರ ಪ್ರದೇಶದಲ್ಲಿ ಸಾಕಷ್ಟು ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಹೋರಾಟ ಹಿಂಸಾತ್ಮಕ ಹಾದಿ ಹಿಡಿದಿದ್ದು ಅನೇಕರು ಗಾಯಾಳುಗಳಾಗಿದ್ದಾರೆ. ಇದರ ನಿಯಂತ್ರಣಕ್ಕೆಂದು ಜಿಲ್ಲಾಡಳಿತವು ಕೆಲ ಹೋರಾಟಗಾರರನ್ನು ಗುರುತಿಸಿ ಅವರಿಗೆ ನೋಟಿಸ್ ಕಳಿಸಿದೆ. ಸೆಕ್ಷನ್ 111ರ (ಶಾಂತಿ ಉಲ್ಲಂಘಿಸುವ ಸಾಧ್ಯತೆ ಇರುವ ಯಾವುದೇ ವ್ಯಕ್ತಿಯ ವಿರುದ್ಧ ಮ್ಯಾಜಿಸ್ಟ್ರೇಟ್ ಆದೇಶ) ಪ್ರಕಾರ ನೋಟಿಸ್ ಕಳುಹಿಸಲಾಗಿದ್ದು, ತಾವು ಇನ್ನು ಮುಂದೆ ಯಾವುದೇ ಹಿಂಸಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲವೆಂದು 50 ಲಕ್ಷದ ಬಾಂಡ್ ಪೇಪರ್ನಲ್ಲಿ ಸಹಿ ಹಾಕಿಕೊಡಬೇಕೆಂದು ಕೇಳಲಾಗಿದೆ.
ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಒಟ್ಟು 24 ಹೋರಾಟಗಾರರಿಗೆ ನೋಟಿಸ್ ಕಳುಹಿಸಲಾಗಿದೆ. ಅದರಲ್ಲಿ ಕನಿಷ್ಠ 11 ಜನರಿಗೆ ಬಾಂಡ್ಗೆ ಸಹಿ ಹಾಕುವಂತೆ ಕೇಳಲಾಗಿದೆ ಎಂದು ನಖಾಸಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 188 ಮತ್ತು ಸೆಕ್ಷನ್ 505 ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿರುವುದಾಗಿ ನಖಾಸಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಗಿರುವ ದೇವೇಂದ್ರ ಸಿಂಗ್ ಧಮಾ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ 36 ಜನರ ಹೆಸರಿದ್ದ ವರದಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದ್ದ, ಸಿಆರ್ಪಿಸಿಯ ಸೆಕ್ಷನ್ 107/116ರ ಅಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಆ ವ್ಯಕ್ತಿಗಳಿಗೆ ಬಾಂಡ್ಗೆ ಸಹಿ ಹಾಕಲು ತಿಳಿಸಬೇಕು ಎಂದು ವಿನಂತಿ ಮಾಡಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 19 ಮತ್ತು 20ರಂದು ಸಂಭಾಲ್ನಲ್ಲಿ ನಡೆದ ಸಿಎಎ ವಿರೋಧದ ಹೋರಾಟದಲ್ಲಿ ಇಬ್ಬರು ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದರು. ಆ ವಿಚಾರವಾಗಿ 12 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. 43 ಆರೋಪಿಗಳನ್ನು ಬಂಧಿಸಲಾಗಿತ್ತು. ಕೆಲವು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.(ಏಜೆನ್ಸೀಸ್)