ನವದೆಹಲಿ: ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಇಂದು (ಆ.22) ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಬಾಹ್ಯಾಕಾಶದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣಿಸಿದ ಮೊದಲ ಭಾರತೀಯ ಗಗನಯಾತ್ರಿ ಶುಕ್ಲಾ ಅವರು, ಇತರ ಸಹ ಗಗನಯಾತ್ರಿಗಳೊಂದಿಗೆ ಆಕ್ಸಿಯಮ್ ಮಿಷನ್ 4 ರ ಭಾಗವಾಗಿ 20 ದಿನಗಳ ಬಾಹ್ಯಾಕಾಶದಲ್ಲಿ ಕಾರ್ಯಾಚರಣೆ ನಡೆಸಿದ ಬಳಿಕ ಕಳೆದ ತಿಂಗಳು ಭೂಮಿಗೆ ಮರಳಿದರು.
ಇವರ ಭೇಟಿಯ ಬಗ್ಗೆ ರಾಷ್ಟ್ರಪತಿ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಗ್ರೂಪ್ ಕ್ಯಾಪ್ಟನ್ ಶುಕ್ಲಾ, ಪ್ರಶಾಂತ್ ಬಾಲಕೃಷ್ಣನ್ ನಾಯರ್ ಮತ್ತು ಪುಣ್ಯಶ್ಲೋಕ್ ಬಿಸ್ವಾಲ್, ಇಸ್ರೋ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ವಿ.ನಾರಾಯಣನ್ ಮತ್ತು ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದ ನಿರ್ದೇಶಕ ದಿನೇಶ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಲಾಯ್ತು. ಅವರು ಬಾಹ್ಯಾಕಾಶದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು ಎಂದು ಬರೆದುಕೊಂಡಿದ್ದಾರೆ. ಇನ್ನೂ ಗಗನಯಾತ್ರಿಗಳ ಭವಿಷ್ಯದ ಪ್ರಯತ್ನಗಳಿಗೆ, ವಿಶೇಷವಾಗಿ ಗಗನಯಾನ ಮಿಷನ್‌ಗಾಗಿ ಇಡೀ ತಂಡಕ್ಕೆ ರಾಷ್ಟ್ರಪತಿಗಳು ತಮ್ಮ ಶುಭಾಶಯಗಳನ್ನು ಕೋರಿದ್ದಾರೆ.
ಇದನ್ನೂ ಓದಿ: ಭೂಮಿ ಒಳಗಿಂದ ರೈತನ ಕಿವಿಗೆ ಬಿತ್ತು ಶಬ್ಧ; ಮಣ್ಣನ್ನು ಅಗೆದು ನೋಡಿದರೆ 1700 ವರ್ಷಗಳಷ್ಟು ಹಳೆಯ ರಹಸ್ಯ ಬೆಳಕಿಗೆ| secret
(ಏಜೆನ್ಸೀಸ್)
ಭಾರತೀಯ ವಾಯುಪಡೆಯ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ, 1984 ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾರ ಬಳಿಕ ಬಾಹ್ಯಾಕಾಶಕ್ಕೆ ಭೇಟಿ ನೀಡಿದ ಎರಡನೇ ಭಾರತೀಯನೆಂಬ ದಾಖಲೆ ಸೃಷ್ಟಿಸಿದ್ದಾರೆ. ಈ ಕಾರ್ಯಾಚರಣೆಗೆ ಭಾರತ ಸುಮಾರು 70 ಮಿಲಿಯನ್ ಡಾಲರ್ ವ್ಯಯಿಸಿದೆ. ಈ ಒಂದು ಐತಿಹಾಸಿಕ ಭೇಟಿಗೆ ನಾಸಾ ಮತ್ತು ಇಸ್ರೋಗೆ ಮಧ್ಯವರ್ತಿಯಾಗಿ ಖಾಸಗಿ ಬಾಹ್ಯಾಕಾಶ ಕಂಪನಿ ಆಕ್ಸಿಯಮ್ ಸ್ಪೇಸ್ ಕೆಲಸ ಮಾಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕಿಂಗ್ ಮಾಡಿದಾಗಿನಿಂದ ಸುಮಾರು 12.2 ಮಿಲಿಯನ್ ಕಿಲೋಮೀಟರ್‌ಗಳನ್ನು ಕ್ರಮಿಸಿ ಭೂಮಿಯ ಸುತ್ತ ಸರಿಸುಮಾರು 433 ಗಂಟೆಗಳು, 18 ದಿನಗಳು ಮತ್ತು 288 ಕಕ್ಷೆಗಳನ್ನು ಸುತ್ತಿದ ಬಳಿಕ ಆಕ್ಸಿಯಮ್ ಮಿಷನ್ 4 (ಆಕ್ಸ್-4) ಸಿಬ್ಬಂದಿ ಮನೆಗೆ ಮರಳಿದ್ದಾರೆ.