ಹೈದರಾಬಾದ್: ಇತ್ತೀಚೆಗಷ್ಟೇ ತೆಲುಗು ನಟ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಕಾರ್ಯಕ್ರಮ ಮುಗಿಸಿಕೊಂಡರು. ಇದು ನಟನ ಎರಡನೇ ವಿವಾಹವಾಗಲಿದ್ದು, ಈ ಹಿಂದೆ ನಟಿ ಸಮಂತಾ ಅವರಿಗೆ ವಿಚ್ಛೇದನ ಕೊಡುವ ಮೂಲಕ ಮೊದಲನೇ ಮದುವೆಗೆ ಗುಡ್ಬೈ ಹೇಳಿದ್ದಾರೆ. ಚೈ ಮತ್ತು ಶೋಭಿತಾ ವಿವಾಹವಾದ ಸುದ್ದಿಯ ಬೆನ್ನಲ್ಲೇ ಅವರ ಸಂಬಂಧ 2027ರಲ್ಲಿ ಮುರಿದುಬೀಳುತ್ತದೆ ಎಂದು ವಿವಾದಗಳಿಗೆ ಹೆಸರುವಾಸಿಯಾಗಿರುವ ಜೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ಆದ್ರೆ, ಅದ್ಯಾಕೋ ಇದೀಗ ಆತನ ಸಮಯವೇ ಸರಿಯಿಲ್ಲ ಎಂಬುದು ಗೋಚರಿಸದಂತಿದೆ.
ತೆಲುಗು ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳ ಕುರಿತು ಭವಿಷ್ಯ ನುಡಿಯುವ ವೇಣು ಸ್ವಾಮಿ, ಜನಪ್ರಿಯ ರಾಜಕಾರಣಿಗಳಿಗೂ ಜೋತಿಷ್ಯ ಹೇಳ್ತಾರೆ. ಅದರಂತೆಯೇ ನಾಗಚೈತನ್ಯ ಮತ್ತು ಶೋಭಿತಾ ಎಂಗೇಜ್ಮೆಂಟ್ ಆದ ತಕ್ಷಣವೇ ಅವರಿಬ್ಬರ ಸಂಬಂಧ 2027ಕ್ಕೆ ಮುರಿದುಬೀಳುತ್ತದೆ. ಅದು ಕೂಡ ಒಂದು ಹೆಣ್ಣಿನ ವಿಷಯಕ್ಕೆ ಎಂದು ಸ್ಫೋಟಕ ಸಂಗತಿಯನ್ನು ಬಹಿರಂಗವಾಗಿ ಹೇಳಿದ್ದಾರೆ. ವೇಣು ಹೇಳಿಕೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ತೆಲುಗು ಚಲನಚಿತ್ರ ಪತ್ರಕರ್ತರ ಸಂಘ ಇದೀಗ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ವರದಿಯಾಗಿದೆ.
2021ರಲ್ಲಿ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದುಕೊಂಡ ಸಮಂತಾ ಮತ್ತು ನಾಗಚೈತನ್ಯ, ತದನಂತರ ಎಲ್ಲಿಯೂ ಒಬ್ಬರ ಬಗ್ಗೆ ಒಬ್ಬರು ಮಾತನಾಡಿಲ್ಲ. ಇನ್ನು ಸಮಂತಾ ಕೈಬಿಟ್ಟು, ಶೋಭಿತಾ ಕೈಹಿಡಿದಿರುವ ನಟನಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಬೆಳವಣಿಗಗಳ ನಡುವೆಯೇ ವೇಣು ಸ್ವಾಮಿ ಹೇಳಿಕೆ ಭಾರೀ ವಿವಾದಕ್ಕೆ ತಿರುಗಿದೆ. ನಾನು ನುಡಿದ ಭವಿಷ್ಯದ ಅರ್ಥ ನೀವಂದುಕೊಂಡತಿಲ್ಲ, ಅದರ ಅರ್ಥವೇ ಬೇರೆ ಇದೆ ಎಂದು ಮತ್ತೊಂದು ವಿಡಿಯೋದಲ್ಲಿ ಸ್ಪಷ್ಟನೆ ನೀಡಲು ಹೋದ ವೇಣು, ಮತ್ತಷ್ಟು ಸಮಸ್ಯೆಗೆ ಸಿಲುಕಿ, ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ,(ಏಜೆನ್ಸೀಸ್).