ಬೆಂಗಳೂರು: ವಿಧಾನಸೌಧದಲ್ಲಿ 10 ಲಕ್ಷ ರೂ. ಹಣ ಸಿಕ್ಕ ಪ್ರಕರಣಕ್ಕೆ ಇದೀಗ ಪೊಲೀಸರ ಪ್ರಾಥಮಿಕ ತನಿಖೆಯಿಂದ ಮಹತ್ವದ ತಿರುವು ಸಿಕ್ಕಿದೆ. ಬಂಧಿತ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ತನಿಖೆಯ ವೇಳೆ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ತಂದಿದ್ದ ಹಣ ಇದು. 10 ಲಕ್ಷ ಹಣವನ್ನು ಸಂಬಂಧಿಕರಿಂದ ಸಾಲ ಪಡೆದು ತಂದಿರುವುದಾಗಿ ಹೇಳಿಕೊಂಡಿದ್ದಾರೆ.
ಬಂಧಿತ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಮಂಡ್ಯದ ಉದ್ಯಮಿ ಮೃತ್ಯುಂಜಯ ಎಂಬುವವರ ಬಳಿ 10 ಲಕ್ಷ ರೂ.ಹಣ ಸಾಲ ಮಾಡಿಕೊಂಡಿದ್ದ. ಆದರೆ ಜಗದೀಶ್ ಹಣವನ್ನು ವಾಪಸ್ಸು ನೀಡದ ಹಿನ್ನೆಲೆಯಲ್ಲಿ ಮೃತ್ಯುಂಜಯ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ದಂಡದ ಮೊತ್ತ ಸೇರಿದಂತ 12 ಲಕ್ಷ ರೂ. ಕಟ್ಟಲು ಆದೇಶಿಸಿತ್ತು.
ಕೋರ್ಟ್ನಿಂದ ಆದೇಶವಾದ ಹಿನ್ನೆಲೆಯಲ್ಲಿ ಜಗದೀಶ್ ಹಣ ಹಿಂತಿರುಗಿಸಲು ನಿರ್ಧಾರ ಮಾಡಿಕೊಂಡಿದ್ದರು. ಇದಕ್ಕಾಗಿ ಸಂಬಂಧಿ ಸಿ.ಶಿವಪ್ರಸಾದ್ ಎಂಬುವವರ ಬಳಿ ಸಾಲದ ರೂಪದಲ್ಲಿ ಜಗದೀಶ ಹಣ ಪಡೆದಿದ್ದರು. ಜಗದೀಶ್ ಸಂಬಂಧಿ ಶಿವಪ್ರಸಾದ್ ಬೆಂಗಳೂರಿನ ಲಿಂಗರಾಜಪುರ ನಿವಾಸಿ. ಸೇನೆಯಲ್ಲಿ ಸುಬೇದಾರ್ ಆಗಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ಬಂದ ಹಣದಲ್ಲಿ ಜಗದೀಶ್ 10 ಲಕ್ಷ ಸಾಲವನ್ನು ಪಡೆದುಕೊಂಡಿದ್ದರು.
ಜಗದೀಶ್ ಸಂಬಂಧಿ ಬಳಿ ಹಣ ಪಡೆದುಕೊಂಡು ಮಂಡ್ಯಕ್ಕೆ ಹಿಂತಿರುಗಲು ಸಿದ್ಧವಾಗಿದ್ದರು. ಆದರೆ ಮಂಡ್ಯಕ್ಕೆ ಹಿಂತಿರುಗಿ ಹೋಗುವ ಮೊದಲು ಅಧಿಕಾರಿಯೊಬ್ಬರು ವಿಧಾನಸೌಧಕ್ಕೆ ಬಂದು ಹೋಗಲು ಹೇಳಿದ್ದರಂತೆ. ಹೀಗಾಗಿ ಕೈಯ್ಯಲ್ಲಿದ್ದ ಹಣದ ಬ್ಯಾಗ್ ಸಮೇತ ವಿಧಾನಸೌಧಕ್ಕೆ ಬಂದಿರುವುದಾಗಿ ವಿಚಾರಣೆಯ ವೇಳೆ ಬಂಧಿತ ಜಗದೀಶ್ ಹೇಳಿಕೊಂಡಿದ್ದಾರೆ.