ಧಾರವಾಡ: ಭಾರತ ಚುನಾವಣಾ ಆಯೋಗವು ಶೀಘ್ರದಲ್ಲಿ ಆರಂಭಿಸಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ಕೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನ ಮತ್ತು ನಿಯಮಗಳ ಅನುಸಾರ ತೊಡಗಿಕೊಳ್ಳಲಿದ್ದು, ಈ ಕಾರ್ಯಕ್ಕೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗವು ಕಾಲ ಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆ, ವಿಶೇಷ ಪರಿಷ್ಕರಣೆ ಮತ್ತು ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಜರುಗಿಸಿ, ಮತದಾರರ ಪಟ್ಟಿಯಲ್ಲಿನ ಅನರ್ಹರ ಹೆಸರುಗಳನ್ನು ತೆಗೆಯುವ ಮತ್ತು ಅರ್ಹ ಮತದಾರರ ಹೆಸರುಗಳನ್ನು ಸೆರ್ಪಡೆ ಮಾಡಲಾಗುತ್ತದೆ. ಅದರಂತೆ ರಾಷ್ಟ್ರೀಯ ಚುನಾವಣಾ ಆಯೋಗವು ಪ್ರಸ್ತುತದಲ್ಲಿರುವ ಮತದಾರರ ಪಟ್ಟಿಯನ್ನು ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮದ ಮೂಲಕ ಹೊಸ ಮತದಾರರ ಪಟ್ಟಿ ತಯಾರಿಸಲು ಕ್ರಮ ವಹಿಸುತ್ತಿದೆ ಎಂದರು.
ರಾಜ್ಯ ಶಾಸಕಾಂಗ ಮತ್ತು ಸಂಸತ್ತಿಗೆ ನಿಯತಕಾಲಿಕವಾಗಿ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಿದಾಗಲೆಲ್ಲ ಹಿಂದಿನ ಮತದಾರರ ಪಟ್ಟಿಗಳು ನಿಷ್ಕ್ಕಿಯವಾಗುತ್ತವೆ ಮತ್ತು ಹೊಸದು ಮಾತ್ರ ಜಾರಿಯಲ್ಲಿರುತ್ತದೆ. ಹಿಂದಿನ ಮತದಾರರ ಪಟ್ಟಿ ಉಲ್ಲೇಖಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂದರು.
ಈ ಪರಿಷ್ಕರಣೆ ಕಾರ್ಯದಲ್ಲಿ ಪ್ರತಿ ಮತಗಟ್ಟೆ ವ್ಯಾಪ್ತಿಯ ಮತದಾರರ ಪಟ್ಟಿ ಮನೆ ಮನೆ ಭೇಟಿ ಮೂಲಕ ಮತಗಟ್ಟೆ ಮಟ್ಟದ ಅಧಿಕಾರಿಗಳು ಪರಿಷ್ಕರಿಸಲಿದ್ದಾರೆ. ಈ ಕಾರ್ಯಕ್ಕೆ ರಾಜಕೀಯ ಪಕ್ಷಗಳು ಮತಗಟ್ಟೆ ಮಟ್ಟದಲ್ಲಿ ನೇಮಿಸುವ ಬಿಎಲ್‌ಎ ಗಳು ಸಹಕಾರ ನೀಡಬೇಕು. ಇದರಿಂದ ಮತ್ತಷ್ಟು ಪಾರದರ್ಶಕವಾಗಿ ಕಾರ್ಯವಾಗುತ್ತದೆ ಎಂದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಬಿಜೆಪಿಯ ಸಿದ್ದು ಕಲ್ಯಾಣಶೆಟ್ಟಿ, ನಾಗಪ್ಪ ಸುತಗಟ್ಟಿ, ಕಾಂಗ್ರೆಸ್‌ನ ಪ್ರಕಾಶ ಹಳಿಯಾಳ, ಜೆಡಿಎಸ್‌ನ ಗುರುರಾಜ ಹುಣಸಿಮರದ, ದೇವರಾಜ ಕಂಬಳಿ ಹಾಗೂ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು, ಎಲ್ಲ ತಾಲೂಕುಗಳು ತಹಸೀಲ್ದಾರರು ಭಾಗವಹಿಸಿದ್ದರು.