ಬೈಲಕುಪ್ಪೆ: ತಾಲೂಕಿನ 42 ಹಾಡಿಗಳಲ್ಲಿನ ಜೇನುಕುರುಬ ಹಾಗೂ ಕೊರಗ ಜನಾಂಗದ ಸಮೀಕ್ಷಾ ಕಾರ್ಯಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ರಾಣಿಗೇಟ್, ಆಶ್ರಮ ಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಜನ್‌ಮನ್ ಯೋಜನೆಯ ನೈಜ ದುರ್ಬಲ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಮೂಲ ಸೌಕರ್ಯಗಳ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೇನುಕುರುಬ ಹಾಗೂ ಕೊರಗ ಜನಾಂಗದವರಿಗೆ ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ರಸ್ತೆ ಮತ್ತು ದೂರಸಂಪರ್ಕ ಜತೆಗೆ ಸುಸ್ಥಿರ ಜೀವನೋಪಾಯಕ್ಕಾಗಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಬುಡಕಟ್ಟು ಸಮುದಾಯದ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ರಾಜ್, ಆರೋಗ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇರಿದಂತೆ ಒಟ್ಟು 9 ಇಲಾಖೆಗಳ ಅಧಿಕಾರಿಗಳು ಈಗಾಗಲೇ ಸರ್ವೇ ಕಾರ್ಯ ಆರಂಭಿಸಿ ಇಂದಿನಿಂದ ಆಧಾರ್ ನೋಂದಣಿ ಮಾಡಲಾಗುತ್ತಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುತ್ತಣ್ಣ ಮಾತನಾಡಿ, ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಗಳಲ್ಲಿ ವಾಸವಿರುವ ಬುಡಕಟ್ಟು ಸಮುದಾಯದ ಜೇನು ಕುರುಬ ಸಮುದಾಯದವರು ಈಗಲೂ ಕಚ್ಚಾ ಮನೆಗಳಲ್ಲಿ ವಾಸವಿದ್ದು, ಅವರಿಗೆ ಪಕ್ಕಾಮನೆ ನಿರ್ಮಿಸಿಕೊಡಬೇಕು. ಸೌಲಭ್ಯವಂಚಿತ ಬುಡಕಟ್ಟು ಸಮುದಾಯದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸವಲತ್ತು ನೀಡಬೇಕು. 15 ವರ್ಷ ಹಳೆಯ ಮನೆಗಳು ಇದ್ದರೂ ಅಂತಹವರನ್ನು ಗುರುತಿಸಿ ಸೌಲಭ್ಯಗಳನ್ನು ನೀಡಬೇಕು ಎಂದರು.
ತಹಸೀಲ್ದಾರ್ ಕುಂಞ ಅಹಮದ್ ಮಾತನಾಡಿ, ಬುಡಕಟ್ಟು ಸಮುದಾಯದವರಿಗೆ ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ಸ್ವಯಂ ಉದ್ಯೋಗ ತರಬೇತಿ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನೋಂದಣಿ ಮಾಡಲಾಗುವುದು, ಅವರಿಗೆ ತರಬೇತಿ ಸಂದರ್ಭದಲ್ಲಿ ಉಚಿತ ಊಟ, ವಸತಿ ಸೌಲಭ್ಯ ನೀಡಲಾಗುವುದು. ತರಬೇತಿ ಕಾರ್ಯಾಗಾರದಲ್ಲಿ ಸೋಪು ಮತ್ತು ಡಿಟರ್ಜೆಂಟ್ ತಯಾರಿಕೆ, ಟೈಲರಿಂಗ್, ಬಿದಿರು ಉತ್ಪನ್ನಗಳ ತಯಾರಿಕೆ, ಬ್ಯೂಟಿಷಿಯನ್ ಜತೆಗೆ ತರಬೇತಿ ಪಡೆದ ನಂತರ ತರಬೇತಿ ಕಿಟ್ ನೀಡಲಾಗುವುದು. ತಯಾರಿಸಿದ ಉತ್ಪನ್ನಗಳನ್ನು ಸಂಬಂಧಪಟ್ಟ ಇಲಾಖೆ ವತಿಯಿಂದ ಖರೀದಿ ಮಾಡಿ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದರು.
ಉಪ ತಹಸೀಲ್ದಾರ್ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ನವೀನ್‌ರಾವ್, ಕೊಪ್ಪ ಪಿಡಿಒ ಕೆ.ವಿ.ಸತೀಶ್, ಕೊಪ್ಪ ಆರೋಗ್ಯಾಧಿಕಾರಿ ಡಾ.ದೀಪಕ್, ರಾಣಿಗೇಟ್ ಆಶ್ರಮ ಶಾಲೆ ಮೇಲ್ವಿಚಾರಕಿ ಯಶೋದಮ್ಮ, ವಿವಿಧ ಇಲಾಖೆ ಸಿಬ್ಬಂದಿ ಪ್ರದೀಪ್, ಧನಂಜಯ, ರಾಣಿಗೇಟ್ ಬುಡಕಟ್ಟು ಸಮುದಾಯದ ಮುಖಂಡರಾದ ನಿಂಗಪ್ಪ, ಜಯಪ್ಪ, ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಸಂಸುದ್ದೀನ್, ಪೂರ್ಣಿಮಾ, ಮಾಜಿ ಸದಸ್ಯ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.