ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್‌ಗಳಿಗೆ ಪಿಡಿಒಗಳ ನಿಯೋಜನೆ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದಾರೆ.
ಪಿಡಿಒಗಳನ್ನು ಚೆಕ್ ಪೋಸ್ಟ್(ಎಸ್‌ಎಸ್ಟಿ, ವಿಎಸ್‌ಟಿ ಮತ್ತು ಎ್ಎಸ್‌ಟಿ)ಗೆ ಬಿಟ್ಟು ಬೇರೆ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯ ನಿಯೋಜಿಸುವಂತೆ ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮುಖ್ಯ ಚುನಾವಣಾಧಿಕಾರಿಗಳನ್ನು ಕೋರಿದ್ದರು.
ಪಿಡಿಒಗಳು ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡುತ್ತಾರೆ. ಸ್ವೀಪ್ ಕಾರ್ಯಕ್ರಮ ನೋಡಿಕೊಳ್ಳುತ್ತಾರೆ. ಗ್ರಾಮ ಪಂಚಾಯಿತಿ ಎಲ್ಲ ಜವಾಬ್ದಾರಿ ಹೊತ್ತಿರುತ್ತಾರೆ. ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಒದಗಿಸಲು, ಗಣಕೀಕೃತ ಕೆಲಸ ಕಾರ್ಯಗಳಿಗೆ ಬೆರಳಚ್ಚು ನೀಡಲು ಅವರ ಅಗತ್ಯವಿದೆ. ನರೇಗಾ ಕಾಮಗಾರಿ ಅನುಷ್ಠಾನಗೊಳಿಸುವ ಹೊಣೆ ಇದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪೂರ್ಣಕಾಲಿಕವಾಗಿ ನಿಯೋಜಿಸಿರುವ ಮತ್ತು ಇನ್ನು ಮುಂದೆ ನೀಯೋಜಿಸಲಾಗುವ ಎಸ್‌ಎಸ್‌ಟಿ ಮತ್ತು ಎ್ಎಸ್‌ಟಿ ತಂಡದಿಂದ ವಿನಾಯಿತಿ ನೀಡಿ, ಸಾಂದರ್ಭಿಕ/ ಅಲ್ಪಾವಧಿಯ ಚುನಾವಣಾ ಜವಾಬ್ದಾರಿಗೆ ನಿಯೋಜಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.
ಈ ಮನವಿಗೆ ಸ್ಪಂದಿಸಿದ ಸಿಇಒ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳು, ಬಿಬಿಎಂಪಿ ಮುಖ್ಯ ಆಯುಕ್ತರು, ಅಪರ ಆಯುಕ್ತರು ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾದಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.