ವಿಧಾನಮಂಡಲ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಕ್ಷೇತ್ರದ, ರಾಜ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಕೂಲಂಕಷ ಚರ್ಚೆ ನಡೆಸಿ, ಪರಿಹಾರದ ಹಾದಿಯನ್ನು ಕಂಡುಕೊಳ್ಳಲಿ. ಜನಸಾಮಾನ್ಯರಿಗೆ ಅನುಕೂಲವಾಗುವಂಥ ಶಾಸನಗಳನ್ನು ರೂಪಿಸಲಿ ಎಂದು ಜನರು ಬಯಸುವುದು ಸರ್ವೆಸಾಮಾನ್ಯ. ಮತ್ತು ಪ್ರಜಾತಂತ್ರ ಮೌಲ್ಯದ ಪ್ರಮುಖ ಆಶಯವೂ ಇದೇ ಆಗಿದೆ. ಆದರೆ, ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸಿದರೆ ನಿರಾಸೆಯೇ ಗೋಚರಿಸುತ್ತಿದೆ. ಹೌದು, ಜನಪರ ವಿಷಯಗಳ ಚರ್ಚೆಗೆ ವೇದಿಕೆ ಆಗಬೇಕಿದ್ದ ಕಲಾಪ ಪ್ರತಿಷ್ಠೆಗೆ ಬಲಿಯಾಗುತ್ತಿದೆ. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಇದಕ್ಕೆ ಸಮಾನ ಜವಾಬ್ದಾರರು. ಟೀಕೆ ಮಾಡುವಾಗ, ಆರೋಪಗಳನ್ನು ಹೊರಿಸುವಾಗ ಅಸಂಸದೀಯ ಪದ ಬಳಸಬಾರದು ಎಂಬ ಸಾಮಾನ್ಯ ವಿವೇಚನೆಯನ್ನೇ ಮರೆತು ಒಬ್ಬರು ಮತ್ತೊಬ್ಬರನ್ನು ಟೀಕಿಸುತ್ತ, ಆ ಪದದಿಂದ ಹಕ್ಕುಚ್ಯುತಿ ಆಯಿತೆಂದು ವಾದಿಸುತ್ತ ಕಾಲಹರಣ ಮಾಡುವುದು ಎಷ್ಟು ಸರಿ? ಈ ಬೆಳವಣಿಗೆಗಳನ್ನೆಲ್ಲ ಜನಸಾಮಾನ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ಎಲ್ಲ ರಾಜಕೀಯ ಪಕ್ಷಗಳು ಮತ್ತು ಶಾಸಕರು ನೆನಪಿನಲ್ಲಿಟ್ಟುಕೊಳ್ಳಬೇಕು. ಗುರು ವಾರ ಕಲಾಪ ಸುಗಮವಾಗಿ ನಡೆದಿದೆ ಅದರೂ, ಇದು ಒಂದು ದಿನಕ್ಕೆ ಸೀಮಿತವಾಗಬಾರದು.
ಸಂವಿಧಾನದ ಬಗ್ಗೆ ಸಮಗ್ರ ಚರ್ಚೆ ನಡೆದಿದ್ದು, ಅದರಲ್ಲಿ ಶಾಸಕರು, ವಿಧಾನ್ ಪರಿಷತ್ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದು ಒಳ್ಳೆಯ ಬೆಳವಣಿಗೆಯೇ. ಆದರೆ, ವಿಧಾನಸಭೆ ಕಲಾಪದಲ್ಲಿ ಹಿರಿಯ ಶಾಸಕ ರಮೇಶ್ಕುಮಾರ್ ಮತ್ತು ಸಚಿವ ಡಾ.ಕೆ.ಸುಧಾಕರ್ ನಡುವಿನ ಬೈಗುಳದ ವಿಷಯ ಮಂಗಳವಾರ ಮತ್ತು ಬುಧವಾರದ ಕಲಾಪವನ್ನೇ ಬಲಿ ತೆಗೆದುಕೊಂಡಿದ್ದು ದುರದೃಷ್ಟಕರ. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಈ ಹೊತ್ತಲ್ಲಿ ತೋರಿದ ವರ್ತನೆ ಖಂಡಿತವಾಗಿಯೂ ಸೂಕ್ತವಾದದ್ದಲ್ಲ. ವಿವಾದ, ಆರೋಪಗಳು ಸಹಜ. ಅವುಗಳನ್ನು ಪ್ರತಿಷ್ಠೆಯ ವಿಷಯವಾಗಿ ಏಕೆ ತೆಗೆದುಕೊಳ್ಳಬೇಕು? ಚರ್ಚೆ ಅಥವಾ ಪರಸ್ಪರ ಮಾತುಕತೆ ಮೂಲಕ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕೆ ಹೊರತು, ಕಲಾಪವನ್ನೇ ಹಾಳು ಮಾಡುವುದು ವಿಪರ್ಯಾಸ. ಶಾಸಕರ ಸವಲತ್ತುಗಳು ಮತ್ತು ಕಲಾಪದ ಖರ್ಚುವೆಚ್ಚಗಳಿಗೆಲ್ಲ ಜನರ ತೆರಿಗೆ ಹಣ ಬಳಕೆಯಾಗುತ್ತಿದೆ. ಹೀಗೆ ಜನರ ಹಣವನ್ನು ವ್ಯರ್ಥ ಮಾಡುವ ಅಧಿಕಾರ ಯಾವುದೇ ಪಕ್ಷಕ್ಕೂ ಇಲ್ಲ.
ಕಲಾಪ ಬೇಡದ ವಿಷಯಗಳಿಗೇ ಆದ್ಯತೆ ನೀಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಅಧಿವೇಶನಕ್ಕೆ ಆಗಾಗ ಮಾಧ್ಯಮಗಳಿಗೆ ನಿರಾಕರಣೆ, ಮೊಗಸಾಲೆ ಮಾತುಕತೆಗೆ ನಿರ್ಬಂಧ ಹೀಗೆ ಹಲವು ವಿವಾದಗಳು. ಸ್ಪೀಕರ್ ಸಾಂವಿಧಾನಿಕ ಹುದ್ದೆಯ ಸ್ಥಾನಮಾನ ಹೊಂದಿದ್ದಾರಾದರೂ, ಇಂಥ ನಿರ್ಣಯಗಳಿಂದ ಏನು ಸಾಧಿಸಲು ಹೊರಟಿದ್ದಾರೆ ಎಂಬುದು ಅರ್ಥವಾಗದು.
ಕಲಾಪಕ್ಕೆ ಮಾಧ್ಯಮಗಳಿಗೆ ಅವಕಾಶ ಮಾಡಿಕೊಟ್ಟರೆ ಶಾಸಕರ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ ಎಂಬ ಸಮರ್ಥನೆಯಲ್ಲಿ ಯಾವುದೇ ಹುರುಳಿಲ್ಲ. ‘ಇತರೆ’ ವಿಷಯಗಳಿಗೆ ಸಮಯ ವಿನಿಯೋಗಿಸುವುದನ್ನು ಬಿಟ್ಟು, ಸುಗಮ ಕಲಾಪ ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಉತ್ತಮ. ಜನಪ್ರತಿನಿಧಿಗಳು ಕೂಡ ತಮ್ಮ ಜವಾಬ್ದಾರಿ, ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಬೇಜವಾಬ್ದಾರಿ ಧೋರಣೆ ತಳೆದರೆ ನಾಳೆಯ ದಿನಗಳಲ್ಲಿ ಜನರಿಗೆ ಉತ್ತರಿಸುವುದು ಕಷ್ಟವಾಗಿ ಬಿಡುತ್ತದೆ. ಪ್ರತಿಷ್ಠೆ, ಅಹಂಕಾರ, ಸ್ವಹಿತಗಳನ್ನು ಬದಿಗಿಟ್ಟು ಬಜೆಟ್ ಬಗ್ಗೆ, ಇತರೆ ಪ್ರಮುಖ ವಿಷಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಲಿ. ಅಧಿವೇಶನದ ಆಶಯ, ಕಲಾಪಕ್ಕೆ ಮಾಡುವ ಖರ್ಚು ವ್ಯರ್ಥವಾಗದಿರಲಿ.