ನ್ಯೂಸ್

ಬೆಳ್ಳಂಬೆಳಗ್ಗೆ ಬಸ್​ಗೆ ಕಾಯುತ್ತಿದ್ದ ಯುವತಿ ಬಳಿ ಬಂದ ಆಟೋ ಚಾಲಕ: ಮಾತು ನಂಬಿದವಳಿಗೆ ಕಾದಿತ್ತು ಶಾಕ್!​

ಬೆಂಗಳೂರು: ಆಟೋ ಹತ್ತಿದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿಯ ನಿವಾಸಿ ಮುಬಾರಕ್ (28) ಬಂಧಿತ. ಮಾಗಡಿ ರಸ್ತೆಯ ನಿವಾಸಿ 18 ವರ್ಷದ ಸಂತ್ರಸ್ತ ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.

ಯುವತಿ ನಗರದ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯಾಗಿದ್ದು, ಬಿಡುವಿನ ಸಮಯದಲ್ಲಿ ವಿವಾಹ ಸಮಾರಂಭದಲ್ಲಿ ಸ್ವಾಗತಕಾರಿಣಿ (ಹೋಸ್ಟಿಂಗ್/ವೆಲ್ಕಮಿಂಗ್) ಕೆಲಸ ಮಾಡಿಕೊಂಡಿದ್ದಳು. ಡಿ.10ರಂದು ಹೆಗಡೆನಗರದಲ್ಲಿ ವಿವಾಹ ಸಮಾರಂಭವೊಂದಕ್ಕೆ ಬರುವಂತೆ ಪರಿಚಿತರು ಕರೆ ಮಾಡಿ ಯುವತಿಯನ್ನು ಆಹ್ವಾನಿಸಿದ್ದರು. ಅದರಂತೆ ವಿವಾಹ ಸಮಾರಂಭಕ್ಕೆ ಹೋಗಿದ್ದ ಯುವತಿ, ತಡರಾತ್ರಿಯಾಗಿದ್ದರಿಂದ ಮಂಟಪದಲ್ಲೇ ತಂಗಿದ್ದಳು. ಮರುದಿನ ಬೆಳಗ್ಗೆ 6 ಗಂಟೆಗೆ ಥಣಿಸಂದ್ರ ಮುಖ್ಯರಸ್ತೆ ಬಳಿ ಬಸ್​ಗಾಗಿ ಕಾಯುತ್ತಿದ್ದಾಗ ಆರೋಪಿ ಮುಬಾರಕ್ ಆಟೋದಲ್ಲಿ ಬಂದು ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿದ್ದ. ನಾಗವಾರ ಕಡೆ ಹೋಗಬೇಕು ಎಂದು ಹೇಳಿದಾಗ, ನಾನೂ ಅದೇ ಜಾಗಕ್ಕೆ ಹೋಗುವುದಾಗಿ ಹೇಳಿ ಯುವತಿಯನ್ನು ಆಟೋಗೆ ಹತ್ತಿಸಿಕೊಂಡಿದ್ದ.

ನಾಗವಾರ ಸಿಗ್ನಲ್ ಬಳಿ ಆಟೋ ನಿಲ್ಲಿಸುವಂತೆ ಯುವತಿ ಸೂಚಿಸಿದರೂ ವೇಗವಾಗಿ ಆಟೋವನ್ನು ಚಲಾಯಿಸಿಕೊಂಡು ಹೋಗಿದ್ದ. ನಿಲ್ಲಿಸಿ ಎಂದು ಯುವತಿ ಚೀರಾಡಿದಾಗ, ನನಗೆ ಸ್ನೇಹಿತರೊಬ್ಬರು ಹಣ ಕೊಡಬೇಕು. ಅವರಿಂದ ಹಣ ಪಡೆದ ಕೂಡಲೇ ನಿಮ್ಮನ್ನು ಬೇಕಾದ ಜಾಗದಲ್ಲಿ ಬಿಡುತ್ತೇನೆ ಎಂದು ಹೇಳಿದ್ದ. ನಿರ್ಜನ ಪ್ರದೇಶವೊಂದರಲ್ಲಿ ಆಟೋ ನಿಲ್ಲಿಸಿ, ಆಟೋದೊಳಗಿನಿಂದ ಯುವತಿಯನ್ನು ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿ ಯುವತಿಯನ್ನು ಅಲ್ಲೇ ಬಿಟ್ಟು ಆಟೋದಲ್ಲಿ ಪರಾರಿಯಾಗಿದ್ದ. ಸಂತ್ರಸ್ತೆ ನಿರ್ಜನ ಪ್ರದೇಶದಿಂದ ಹತ್ತಿರವಿದ್ದ ಮುಖ್ಯರಸ್ತೆಗೆ ನಡೆದು ಬಂದು, ಅದೇ ರಸ್ತೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದವರ ನೆರವು ಪಡೆದು ಮನೆ ಸೇರಿದ್ದಳು.

ಆಟೋ ನಂಬರ್​ನಿಂದ ಆರೋಪಿ ಪತ್ತೆ

ಆರೋಪಿಯ ಆಟೋ ನೋಂದಣಿ ಸಂಖ್ಯೆಯನ್ನು ಯುವತಿ ಪೊಲೀಸರಿಗೆ ತಿಳಿಸಿದ್ದಳು. ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಯುವತಿ ನೀಡಿದ ಆಟೋ ನಂಬರ್ ಪತ್ತೆ ಮಾಡಿದಾಗ ಆರೋಪಿ ಮುಬಾರಕ್​ನ ಸುಳಿವು ಸಿಕ್ಕಿತ್ತು.