ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಲ್ಲೆ ನಡೆಸಿದ ಜಾನ್ ಕುಮಾರ್ ಎಂಬಾತ ಲಿಂಗರಾಜಪುರಂ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿದ್ದಾನೆ.
ಕಮ್ಮನಹಳ್ಳಿಯ ಜಿಯಾನ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಜಾನ್ ಕುಮಾರ್ ಆರೋಪಿ. ಈತ ಮಗಳಿಗೆ ಅನಾರೋಗ್ಯವಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ಕೇಳಿದ್ದ. ಅದಕ್ಕೆ ಒಪ್ಪದ ಅಕೌಂಟಂಟ್, ಆಸ್ಪತ್ರೆಯ ನಿಯಮದಂತೆ ಬಿಲ್ ಮಾಡಿದ್ದೇನೆ ಎಂದು ಹೇಳಿದ್ದರು. ಅಷ್ಟಕ್ಕೇ ಸಿಟ್ಟಾದ ಜಾನ್ ಕುಮಾರ್ ಅಕೌಂಟಂಟ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಗಾಯಗೊಂಡಿರುವ ಅಕೌಂಟಂಟ್ನ್ನು ಜಿಯಾನ್ ಆಸ್ಪತ್ರೆಯಲ್ಲಿಯೇ ಅಡ್ಮಿಟ್ ಮಾಡಲಾಗಿದೆ. ಇದನ್ನೂ ಓದಿ: VIDEO: ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾರಿಂದ ರಾಜರಾಜೇಶ್ವರಿ ದೇವಿಗೆ ಉರುಳು ಸೇವೆ…
ಆಸ್ಪತ್ರೆ ಮ್ಯಾನೇಜ್ಮೆಂಟ್ ಪೊಲೀಸರಿಗೆ ದೂರು ನೀಡಿದರೂ ಮೊದಲು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು. ನಂತರ ದೂರು ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು, ಜಾನ್ಕುಮಾರ್ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.