ರಾಮನ ಪಾತ್ರಕ್ಕೆ ಬಳಸಿರುವ ಅಸ್ಸಾಂನ ಬಿದಿರು ಮತ್ತು ಬೆತ್ತದ ವಿಶೇಷ ಕವಚ. 
ನ್ಯೂಸ್

'ರಾಮಾಯಣ'ದಲ್ಲಿ ಅಸ್ಸಾಂ ಕಲೆಯ ಕಂಪು! ರಾಮ-ಲಕ್ಷ್ಮಣರ ಕವಚದ ಹಿಂದಿದೆ ಬಾರ್ಪೇಟಾ ಕಲಾವಿದರ ಕೈಚಳಕ | Ramayana Movie

Assam Bamboo Armour: ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಸಿನಿಮಾ ತನ್ನ ಅದ್ಧೂರಿ ಮೇಕಿಂಗ್‌ನಿಂದಲೇ ಗಮನ ಸೆಳೆಯುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಅದ್ಭುತ ದೃಶ್ಯಗಳು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಗೀತದ ಜತೆಗೆ ಪಾತ್ರಗಳ ವೇಷಭೂಷಣಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ.

ವಿಶೇಷವಾಗಿ, ವನವಾಸದ ದೃಶ್ಯಗಳಲ್ಲಿ ರಾಮ ಮತ್ತು ಲಕ್ಷ್ಮಣನ ಪಾತ್ರಗಳಿಗೆ ಬಿದಿರು ಹಾಗೂ ಬೆತ್ತದಿಂದ ತಯಾರಿಸಿದ ವಿಶಿಷ್ಟ ಕವಚಗಳನ್ನು ಬಳಸಲಾಗಿದೆ. ಈ ಕವಚಗಳ ವಿನ್ಯಾಸ ಮತ್ತು ತಯಾರಿಕೆಯ ಹಿಂದೆ ಅಸ್ಸಾಂನ ಕಲಾವಿದರ ಕೈಚಳಕವಿದೆ.

ಅಸ್ಸಾಂನ ಬಿದಿರು, ಬೆತ್ತದ ಕವಚ

ಚಿತ್ರದಲ್ಲಿ ರಾಮನ ಪಾತ್ರದಲ್ಲಿ ನಟಿಸಿರುವ ರಣಬೀರ್ ಕಪೂರ್ ಹಾಗೂ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿ ದುಬೆ ಅವರು ವನವಾಸದ ದೃಶ್ಯಗಳಲ್ಲಿ ವಿಶೇಷ ಬಿದಿರು ಮತ್ತು ಬೆತ್ತದ ಕವಚಗಳನ್ನು ಧರಿಸಿದ್ದಾರೆ. ಈ ಕವಚಗಳನ್ನು ತಯಾರಿಸುವ ಕೆಲಸ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಕಲಾವಿದರಿಗೆ ವಹಿಸಲಾಗಿತ್ತು.

ಮುಂಬೈನಲ್ಲಿ ಸೂಕ್ತವಾದ ಕವಚದ ವಿನ್ಯಾಸಕ್ಕಾಗಿ ಹುಡುಕಾಟ ನಡೆಸಿದ ಚಿತ್ರತಂಡಕ್ಕೆ ಕೊನೆಗೆ ಅಸ್ಸಾಂನ ಬಾರ್ಪೇಟಾದಲ್ಲಿ ಪರಿಹಾರ ಸಿಕ್ಕಿದೆ. ಜಾನಿಯಾ ಪ್ರದೇಶದ ಬಾಂಗ್ಲಿಪಾರಾ ಗ್ರಾಮದ ಕರಕುಶಲ ಕಲಾವಿದ ಜಯನಲ್ ಅಬ್ದಿನ್, ನಾಗೇನ್ ಬಿಸ್ವಾಸ್ ಮತ್ತು ಅವರ ತಂಡ ಈ ವಿಶೇಷ ಕವಚಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕವಚದ ವಿಶೇಷತೆ ಏನು?

ಈ ಕವಚಗಳನ್ನು ತಯಾರಿಸಲು ಅಸ್ಸಾಂನ ಬ್ರಹ್ಮಪುತ್ರ ಕಣಿವೆಯಲ್ಲಿ ದೊರೆಯುವ 'ಸರ್ಪತ್' (Sarpat) ಬೆತ್ತವನ್ನು ಮೂಲ ವಸ್ತುವಾಗಿ ಬಳಸಲಾಗಿದೆ. ಇದು ಹಗುರವಾಗಿರುವುದರಿಂದ ಧರಿಸಲು ಅನುಕೂಲಕರವಾಗಿದೆ. ಇದರ ಜತೆಗೆ ಸೆಣಬಿನ ಅಲಂಕಾರ ಹಾಗೂ ಮರದ ತುಣುಕುಗಳನ್ನು ಸೂಕ್ಷ್ಮವಾಗಿ ಸೇರಿಸಿ ಕವಚಕ್ಕೆ ವಿಶೇಷ ವಿನ್ಯಾಸ ನೀಡಲಾಗಿದೆ.

ಇದನ್ನೂ ಓದಿ: ರೈಲಿನ ವಾಶ್‌ರೂಮ್‌ನಲ್ಲಿ ನಡೆದಿದ್ದೇನು? ಮಹಿಳೆ ಹಿಂದೆ ಹೋದ ವ್ಯಕ್ತಿಯ ವಿಡಿಯೋ ವೈರಲ್! | Indian Railways

ಅಸ್ಸಾಂನ ಸಾಂಪ್ರದಾಯಿಕ ಬೆತ್ತದ ಕರಕುಶಲತೆಯಲ್ಲಿ ರೂಪುಗೊಂಡ ಈ ಕವಚಗಳನ್ನು ಮುಂಬೈನಲ್ಲಿ ಅಂತಿಮವಾಗಿ ಸಿದ್ಧಪಡಿಸಲಾಗಿದೆ. ಈ ಮೂಲಕ 'ರಾಮಾಯಣ' ಸಿನಿಮಾದಲ್ಲಿ ಸ್ಥಳೀಯ ಕರಕುಶಲ ಕಲೆಗೆ ಅವಕಾಶ ದೊರೆತಿದ್ದು, ಬಾರ್ಪೇಟಾ ಕಲಾವಿದರ ಕೈಚಳಕ ದೇಶದ ಗಮನ ಸೆಳೆಯುವಂತಾಗಿದೆ..