ಗುವಾಹಟಿ: ಕಚ್ಚಾ ತೈಲ ಸೋರಿಕೆಯಿಂದಾಗಿ ನದಿ ನೀರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಆಸ್ಸಾಂನ ಗಿಬ್ರುಗ ಜಿಲ್ಲೆಯ ನಹರ್ಕಟಿಯಾ ಪಟ್ಟಣದಲ್ಲಿ ಕಂಡುಬಂದಿದೆ. ಎರಡು ದಿನಗಳ ಹಿಂದೆ ಡಿಹಿಂಗ್ ನದಿಯ ಬಳಿ ತೈಲ ಸೋರಿಕೆಯಾಗಿದ್ದು, ಸತತ ಎರಡು ದಿನಗಳಿಂದ ಬೆಂಕಿ ಹೊತ್ತಿ ಉರಿಯುತ್ತಿರುವುದಾಗಿ ವರದಿಯಾಗಿದೆ.
ಡಿಹಿಂಗ್ ನದಿಯ ಬಳಿ ಕಚ್ಚಾ ತೈಲದ ಪೈಪ್ಪೈನ್ ಇದೆ. ಈ ಕಚ್ಚಾ ತೈಲವು ಸೆಂಟ್ರಲ್ ಟ್ಯಾಂಕ್ ಒಂದರಲ್ಲಿ ಸಂಗ್ರಹವಾಗಬೇಕಿದ್ದು, ಅದರಲ್ಲಿ ಕೆಲವು ತಾಂತ್ರಿಕ ದೋಷ ಉಂಟಾದ ಹಿನ್ನೆಲೆ ಪೈಪ್ಲೈನ್ನಲ್ಲಿ ಒತ್ತಡ ಉಂಟಾಗಿ ಸ್ಫೋಟಗೊಂಡಿದೆ. ಜನವರಿ 31ರ ರಾತ್ರಿ ಈ ಘಟನೆ ನಡೆದಿದ್ದು ಮಾರನೇ ದಿನ ರಾತ್ರಿ ಬೆಂಕಿ ಹತ್ತಿಕೊಂಡಿದೆ. ಬೆಂಕಿ ನಂದಿಸಲು ವಿಶೇಷ ತಂಡವನ್ನು ಕಳುಹಿಸಲಾಗಿದ್ದು, ಬೆಂಕಿ ನಂದಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಇಂದು ನದಿಯ ನೀರಿನಲ್ಲಿಯೂ ಸಹ ಬೆಂಕಿ ಹತ್ತಿಕೊಂಡಿದ್ದು, ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿರುವುದಾಗಿ ಆಯಿಲ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ನದಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾತನಾಡಿರುವ ಅಧಿಕಾರಿಗಳು, ಬೆಂಕಿ ನಿಯಂತ್ರಣದಲ್ಲಿಯೇ ಇದೆ. ಆದರೆ ಇಂದು ನದಿಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಗ್ರಾಮಸ್ಥರೇ ಕಾರಣವಿದ್ದಿರಬಹುದು. ತೈಲ ಸೋರಿಕೆಯಾಗಿದೆ ಎಂದು ತಿಳಿದ ಯಾವುದೋ ಗ್ರಾಮಸ್ಥರೇ ನದಿಯಲ್ಲಿ ಬೆಂಕಿಯನ್ನು ಹಚ್ಚಿರಬೇಕು ಎಂದು ದೂರಿದ್ದಾರೆ.
ಎರಡು ದಿನಗಳಿಂದ ದಟ್ಟ ಹೊಗೆಯನ್ನು ಹೊರಸೂಸುತ್ತಿರುವ ಬೆಂಕಿಯಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಹೇಳಲಾಗಿದೆ. ಅಪಾರ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗುತ್ತಿದ್ದು, ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ. (ಏಜೆನ್ಸೀಸ್)