ನ್ಯೂಸ್

Assam | ಕಾಂಗ್ರೆಸ್ ಅಧಿಕಾರವಧಿಯಲ್ಲಿ ಲಂಚ ನೀಡದೆ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ: ಹಿಮಂತ ಬಿಸ್ವ ಶರ್ಮಾ

ಗುವಾಹಟಿ: ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಲಂಚ ನೀಡದೆ ಯಾರಿಗೂ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಮ್ಮ ಆಡಳಿತಾವಧಿಯಲ್ಲಿ ಸುಮಾರು ಎರಡು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೆ, ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಈವರೆಗೆ 1.4 ಲಕ್ಷ ಯುವಜನತೆ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಸಿಎಂ ಶರ್ಮಾ ಅವರು ಹೇಳಿದ್ದಾರೆ.

ಕಾಂಗ್ರೆಸ್​ ಅಧಿಕಾರವಧಿಯಲ್ಲಿ ಲಂಚ ನೀಡದೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದು ಯುವಜನತೆ ನಂಬುತ್ತಿರಲಿಲ್ಲ. ಕಡಿಮೆ ವೇತನ ಕೆಲಸಗಳಿಗೂ ಒಂದು ಕೋಟಿ ಲಂಚ ನೀಡಬೇಕಿತ್ತು. ಅಸ್ಸಾಂ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷರ ಸ್ಥಾನಕ್ಕೆ ಉದ್ಯೋಗ ಆಕಾಂಕ್ಷಿಗಳಿಂದ ಹಣ ವಸೂಲಿ ಮಾಡುವಂತಹ ವ್ಯಕ್ತಿಗಳನ್ನೇ ಕಾಂಗ್ರೆಸ್​ ಸರ್ಕಾರ ಆಯ್ಕೆ ಮಾಡುತ್ತಿತ್ತು. ಆದರೆ ಈಗ ಯಾವುದೇ ಲಂಚ ಪಡೆಯದೆ ಪಾರದರ್ಶಿಕವಾಗಿ ನೇಮಕಾತಿ ಪರೀಕ್ಷೆಗಳನ್ನು ನಾವು ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.

ಗ್ರೇಡ್ III ಹುದ್ದೆಗಳಿಗೆ ಅಸ್ಸಾಂ ನೇರ ನೇಮಕಾತಿ ಪರೀಕ್ಷೆ (ADRE) 2024 ರ ಎರಡನೇ ಹಂತವು ಭಾನುವಾರ ರಾಜ್ಯಾದ್ಯಂತ ನಡೆಯಲಿದ್ದು, ಅಧಿಕಾರಿಗಳು ಸುಗಮ ಮತ್ತು ಪಾರದರ್ಶಕ ಪರೀಕ್ಷಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದಾರೆ.

ರಾಜ್ಯ ಮಟ್ಟದ ನೇಮಕಾತಿ ಆಯೋಗವು (SLRC) ನಿರ್ವಹಿಸುವ ಲಿಖಿತ ಪರೀಕ್ಷೆಯು 27 ಜಿಲ್ಲೆಗಳಲ್ಲಿ ಹರಡಿರುವ 822 ಕೇಂದ್ರಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ. ಈ ನಿರ್ಣಾಯಕ ಪರೀಕ್ಷೆಗೆ 7,34,080 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 2021ರ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರತಿ ವರ್ಷ ಒಂದು ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಬಳಿಕ ಈ ಅಂಕಿ ಅಂಶವು 5 ವರ್ಷಗಳ ಅವಧಿಗೆ ಎಂದು ಹೇಳಿಕೊಂಡಿತ್ತು.