ಗುವಾಹಟಿ: 2024-25ನೇ ಸಾಲಿಗೆ 2.9 ಲಕ್ಷ ಸಾವಿರ ಕೋಟಿ ರೂಪಾಯಿ ಬಜೆಟ್ ಮಂಡಿಸಿರುವ ಅಸ್ಸಾಂ ಸರ್ಕಾರ ಯಾವುದೇ ಹೊರ ತೆರಿಗೆಯನ್ನು ಪ್ರಸ್ತಾಪಿಸಿಲ್ಲ. ಬಜೆಟ್ನಲ್ಲಿ 774.47 ಕೋಟಿ ರೂಪಾಯಿ ಕೊರತೆಯನ್ನು ತೋರಿಸಲಾಗಿದ್ದು, ಬಾಲ್ಯವಿವಾಹವನ್ನು ತಡೆಗಟ್ಟಲು ಸರ್ಕಾರ ಮಹತ್ವದ ಘೋಷಣೆ ಒಂದನ್ನು ಮಾಡಿದೆ.
ಅಸ್ಸಾಂ ಸರ್ಕಾರದ ಹಣಕಾಸು ಸಚಿವೆ ಅಜಂತಾ ನಿಯೋಗ್, ಬಾಲ್ಯವಿವಾಹವನ್ನು ತಡೆಗಟ್ಟುವ ಸಲುವಾಗಿ ಸರ್ಕಾರ 10 ಲಕ್ಷ ಹೆಣ್ಣುಮಕ್ಕಳಿಗೆ ಸ್ನಾತಕೋತರದವರೆಗೆ ಉಚಿತ ಶಿಕ್ಷಣವನ್ನು ನೀಡುವುದಾಗಿ ತಮ್ಮ ಬಜೆಟ್ ಭಾಷಣದ ವೇಳೆ ಘೋಷಿಸಿದ್ದಾರೆ.
ಮುಖ್ಯಮಂತ್ರಿ ನಿಜುತ್ ಮೊಯಿನಾ ಯೋಜನೆ ಅಡಿ , ಉನ್ನತ, ಮಾಧ್ಯಮಿಕ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದ ಹಂತಗಳಲ್ಲಿ ಓದಲು ಬಯಸುವ ಹೆಣ್ಣುಮಕ್ಕಳಿಗೆ ಸರ್ಕಾರದ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಹೆಣ್ಣುಮಕ್ಕಳಿಗೆ ರಾಜ್ಯ ಸರ್ಕಾರವು ಕಾಲೇಜಿಗೆ ಪ್ರಥಮ ವರ್ಷ ಸೇರಿದ ವಿದ್ಯಾರ್ಥಿಗಳಿಗೆ 10,000 ರೂ, ಪದವಿ ವಿದ್ಯಾರ್ಥಿಗಳಿಗೆ 12,500 ರೂ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳಿಗೆ 15,000 ರೂ ಪ್ರೋತ್ಸಾಹದನ ನೀಡುತ್ತದೆ ಎಂದು ತಿಳಿಸಿದ್ದಾರೆ.
ಇದಲ್ಲದೆ ಚಹಾ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಬಾಕಿ ವಿದ್ಯುತ್ ಬಿಲ್ಅನ್ನು ಸರ್ಕಾರ ಮನ್ನಾ ಮಾಡಿದ್ದು, ಅದರ ಬಾಕಿ ಮೊತ್ತ 75 ಕೋಟಿ ರೂಪಾಯಿಗಳನ್ನು ಸರ್ಕಾರದಿಂದ ಭರಿಸಲಾಗುವುದು ಎಂದು ಹಣಕಾಸು ಸಚಿವೆ ಅಜಂತಾ ನಿಯೋಗ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.