ಗುವಾಹಟಿ: ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ ತನ್ನ ಮೊದಲ ಗೋ ದವಾಖಾನೆಯನ್ನು ಗೋಪಾಷ್ಟಮಿ ದಿನವಾದ ಭಾನುವಾರ ಪಡೆದುಕೊಂಡಿದೆ. ಅಸ್ಸಾಂನ ದಿಬ್ರುಗಡದಲ್ಲಿ ವಿಶೇಷವಾಗಿ ಗೋವುಗಳಿಗಷ್ಟೇ ಚಿಕಿತ್ಸೆ ನೀಡುವ ಆಸ್ಪತ್ರೆ ಶುರುವಾಗಿದೆ.
ಈ ಹೊಸ ಆಸ್ಪತ್ರೆ ದಿಬ್ರುಗಢ ಪಟ್ಟಣದ ಗೋಪಾಲ ಗೋಶಾಲೆ ಆವರಣದಲ್ಲಿ ಆರಂಭವಾಗಿದ್ದು, ಸಾಮಾಜಿಕ ಕಾರ್ಯಕರ್ತ ಸುನಿಲ್ ಅಗರವಾಲ್ ಉದ್ಘಾಟಿಸಿದರು. ಗೋಪಾಷ್ಟಮಿ ಹಬ್ಬದ ದಿನವೇ ಇದನ್ನು ಆರಂಭಿಸಲಾಗಿದೆ. ಗೋಪಾಲ ಗೋಶಾಲೆಯ ಅಧ್ಯಕ್ಷ ನಿರ್ಮಲ್ ಬೆರಿಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈಶಾನ್ಯ ರಾಜ್ಯಗಳ ಪೈಕಿ ಇದುವೇ ಮೊದಲನೇ ಗೋ ಆಸ್ಪತ್ರೆ. ಇಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ಸೌಲಭ್ಯಗಳೂ ಇದ್ದು ಉತ್ತಮ ಮೂಲಸೌಕರ್ಯಗಳನ್ನು ಹೊಂದಿದ್ದು, ಗೋವುಗಳಿಗೆ ಸೂಕ್ತ ಚಿಕಿತ್ಸೆ ಇಲ್ಲೇ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಅಸಹಾಯಕ ಗೋವುಗಳ ಪಾಲನೆಗಾಗಿ ಗೋಶಾಲೆಯನ್ನು ಬಹಳ ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ. ಈ ಗೋಶಾಲೆಯನ್ನು ನಿರ್ವಹಿಸುವುದಕ್ಕೆಂದೇ ಒಂದು ಸಮಿತಿ ಇದೆ. ಗೋಶಾಲೆಯಲ್ಲಿ ಸದ್ಯ 368 ಹಸು, ಹೋರಿ, ಕರುಗಳಿವೆ. (ಏಜೆನ್ಸೀಸ್)