Lachit Borphukan Biopic 
ನ್ಯೂಸ್

Lachit Borphukan Biopic - ಆದಿತ್ಯ ಧರ್​ ಜತೆ ಅಸ್ಸಾಂ ಸಿಎಂ ಹಿಮಂತಾ ಚರ್ಚೆ

Lachit Borphukan Biopic
"ಧುರಂಧರ್​' ಸರಣಿಯ ಅದ್ಭುತ ಯಶಸ್ಸಿನ ಬಳಿಕ ಆದಿತ್ಯ ಧರ್​, ಬಾಲಿವುಡ್​ನ ಬಹುಬೇಡಿಕೆಯ ನಿರ್ದೇಶಕ ಎನಿಸಿಕೊಂಡಿದ್ದಾರೆ. ಹಲವು ಹೊಸ ಪ್ರಾಜೆಕ್ಟ್​ಗಳನ್ನು ನಿರ್ದೇಶಿಸಲು ಅವಕಾಶ ಬರುತ್ತಿದ್ದರೂ, ಆದಿತ್ಯ ಅತ್ಯಂತ ಎಚ್ಚರಿಕೆಯಿಂದ ಹೊಸ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ "ಧುರಂಧರ್​ 2' ತೆರೆಗೆ ಬಂದು ಒಂದು ವರ್ಷದ ಬಳಿಕ ಅರ್ಥಾತ್​ 2027ರ ಮಾರ್ಚ್​ನಲ್ಲಿ ಅವರ ಹೊಸ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಅದರ ನಡುವೆಯೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮಾ, ಮಹಾರಾಜ ಲಚಿತ್​ ಬೊುರ್ಕನ್​ ಸಿನಿಮಾ ಮಾಡಲು ಆದಿತ್ಯ ಧರ್​ಗೆ ಆಫರ್​ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಖುದ್ದು ಅವರೇ ಈ ಬಗ್ಗೆ ಬಹಿರಂಗಪಡಿಸಿದ್ದು, "ನಮ್ಮ ಸರ್ಕಾರದ ವತಿಯಿಂದಲೇ ಲಚಿತ್​ ಬೊುರ್ಕನ್​ ಅವರ ಸಾಹಸಗಾಥೆಯ ಕುರಿತು ಸಿನಿಮಾ ಮಾಡುವ ಕುರಿತು ಚರ್ಚಿಸುತ್ತಿದ್ದೇವೆ. ಅವರಂತಹ ವೀರಸೇನಾನಿಯ ಕಥೆಯನ್ನು ವಿಶ್ವದ ಮುಂದಿಡುವುದು ಕೂಡ ಸಾಧನೆಯೇ ಸರಿ. ಹಾಗೇನಾದರೂ ಆದಿತ್ಯ ಧರ್​ ಅವರು ಈ ಸಿನಿಮಾ ಮಾಡಲು ಸಾಧ್ಯವಾಗದಿದ್ದರೆ, ಬೇರೆ ನಿರ್ದೇಶಕರನ್ನು ಸಂಪರ್ಕಿಸಲಿದ್ದೇವೆ. ಲಚಿತ್​ ಬೊುರ್ಕನ್​ ಅವರ ಜೀವನದ ಕುರಿತು ಒಂದೊಳ್ಳೆ ಸಿನಿಮಾ ಮಾಡುವುದಷ್ಟೇ ನಮ್ಮ ಉದ್ದೇಶ' ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಈಗಾಗಲೇ ಆದಿತ್ಯ ಧರ್​ ಜತೆ ಹಿಮಂತಾ ಒಂದು ಸುತ್ತಿನ ಮಾತುಕತೆ ಮುಗಿಸಿದ್ದು, ಆಗಸ್ಟ್​ನಲ್ಲಿ ನಿರ್ದೇಶಕನನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಲಚಿತ್​ ಬೊರ್ಫುಕನ್​ ಯಾರು?
ಲಚಿತ್​ ಬೊರ್ಫುಕನ್​ ​ಅಸ್ಸಾಂನ ಅಹೋಂ ಸಾಮ್ರಾಜ್ಯದ ಸೇನಾಧಿಪತಿಯಾಗಿದ್ದರು. 1662ರಲ್ಲಿ ಮೊಘಲ್​ ದೊರೆ ಔರಂಗಜೇಬನು ಅಸ್ಸಾಂ ಮೇಲೆ ದಾಳಿ ಮಾಡಿ, ಗುವಾಹಟಿ ವಶಪಡಿಸಿಕೊಂಡನು. ಆತನಿಂದ ಗುವಾಹಟಿಯನ್ನು ಮರುವಶಪಡಿಸಿಕೊಂಡಿದ್ದಲ್ಲದೇ, ಹಲವು ಬಾರಿ ದಂಡೆತ್ತಿ ಬಂದ ತಮಗಿಂತ ಹಲವು ಪಟ್ಟು ದೊಡ್ಡ ಸೈನ್ಯ ಹೊಂದಿದ್ದ ಮೊಘಲರನ್ನು ಸದೆಬಡಿದ ಹೆಗ್ಗಳಿಕೆ ಸೇನಾಧಿಪತಿ ಲಚಿತ್​ ಬೊರ್ಫುಕನ್​ ಗೆ ಸಲ್ಲುತ್ತದೆ. 1671ರಲ್ಲಿ ಮೊಘಲರ ವಿರುದ್ಧ ನಡೆದ ಸರೈಘಾಟ್​ ಯುದ್ಧದಲ್ಲಿ ಅನಾರೋಗ್ಯದ ನಡುವೆಯೂ ಹೋರಾಡಿದ ಬೊರ್ಫುಕನ್​ ​ಸಾಹಸಗಾಥೆ ಈಗಲೂ ಅಸ್ಸಾಂನ ಮನೆಮನೆಯಲ್ಲೂ ಜನಜನಿತವಾಗಿದೆ.