ದೀಸ್ಪುರ್: ಅಸ್ಸಾಂನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮ ಅವರು ಖಡಕ್ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರೇ 50 ಸಾವಿರವಲ್ಲ 500 ಕಿ.ಮೀ ಪ್ರಯಾಣದುದ್ದಕ್ಕೂ ಒಂದೇ ಒಂದು ಸ್ಥಳದಲ್ಲಿ 2 ಸಾವಿರ ಮಂದಿಯು ಕೂಡ ರಾಹುಲ್ರನ್ನು ನೋಡಲು ಬರಲಿಲ್ಲ. ನೀವು ಪೋಸ್ಟ್ ಮಾಡಿರುವ ವಿಡಿಯೋವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಗಮನಿಸಿ ಮತ್ತು ಅಲ್ಲಿರುವ ಜನಸಂಖ್ಯೆಯನ್ನು ಎಣಿಸಿ. ಅಸ್ಸಾಂ ಮಂದಿ ರಾಮನ ಜತೆಗಿರುತ್ತಾರೆ ಹೊರತು ರಾವಣನ ಜತೆಗಲ್ಲ ಎಂದು ಎಕ್ಸ್ ಖಾತೆಯ ಮೂಲಕ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಏನು ಹೇಳಿದ್ದರು? ಇಂದು ಮಧ್ಯಾಹ್ನ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಪೊಲೀಸರು ತಡೆಯುತ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡಿ, ಯಾತ್ರೆಯನ್ನು ಹತ್ತಿಕ್ಕಲು ಸಿಎಂ ಹಿಮಂತ್ ಬಿಸ್ವಾ ಶರ್ಮ ತೀವ್ರ ಕ್ರಮ ತೆಗೆದುಕೊಂಡಿರುವುದನ್ನು ನೋಡಿದರೆ, ಅವರಲ್ಲಿ ಯಾತ್ರೆಯ ಮೇಲೆ ಎಷ್ಟು ಭಯವಿದೆ ಎಂಬುದು ಬಹಿರಂಗವಾಗುತ್ತದೆ. ಯಾತ್ರಿಕರ ಮೇಲಿನ ದಾಳಿ, ಎಫ್ಐಆರ್ ದಾಖಲು ಮತ್ತು ದೇವಸ್ಥಾನ ಪ್ರವೇಶವನ್ನು ನಿರ್ಬಂಧಿಸುವುದನ್ನು ನೋಡಿದರೆ, ಬಿಸ್ವಾರ ಹತಾಶೆ ಹೆಚ್ಚಾಗಿರುವುದು ಕಾಣಿಸುತ್ತದೆ.
ರಾಹುಲ್ ಗಾಂಧಿ ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಯಾತ್ರಿಗಳನ್ನು ಗುವಾಹಟಿ ಗಡಿಯಲ್ಲೇ ತಡೆದು ನಿಲ್ಲಿಸಲಾಗಿದೆ. ರಾಹುಲ್ ಅವರನ್ನು ಬಂಧಿಸಲು ರಾಜ್ಯದ ಸಂಪನ್ಮೂಲಗಳನ್ನು ಬಳಸುವ ಹಿಮಂತ್ ಬಿಸ್ವಾ ಅವರ ಯೋಜನೆಯು ರಾಹುಲ್ ಗಾಂಧಿಯನ್ನು ತಡೆಯಲು ಸಾಧ್ಯವಿಲ್ಲ ಮತ್ತು ನ್ಯಾಯಕ್ಕಾಗಿ ನಮ್ಮ ಯಾತ್ರೆಯು ಮುಂದುವರಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಹಿಂತ್ ತಿರುಗೇಟು ನೀಡಿದ್ದಾರೆ.