ಚೀನಾ: ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ 11 ನೇ ದಿನದಂದು ಭಾರತವು ತನ್ನ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಮುನ್ನುಗ್ಗುತ್ತಿದೆ. 10ನೇ ದಿನ ಭಾರತ ಒಟ್ಟು 9 ಪದಕಗಳನ್ನು ಗೆದ್ದುಕೊಂಡಿದ್ದು, ಇದರಲ್ಲಿ ಪಾರುಲ್ ಚೌಧರಿ ಮತ್ತು ಅಣ್ಣು ರಾಣಿ ಚಿನ್ನದ ಪದಕಗಳು ಸೇರಿದ್ದವು.
ಇಂದು ಬುಧವಾರ ನಡೆದ ಕಾಂಪೌಂಡ್ ಆರ್ಚರಿ ಮಿಕ್ಸೆಡ್ ಟೀಂ ಫೈನಲ್‌ನಲ್ಲಿ ಭಾರತದ ಆಟಗಾರರಾದ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರವೀಣ್ ಓಜಸ್ ಡಿಯೋಟಾಲೆ ಅವರು ಚಿನ್ನ ಗೆದ್ದಿದ್ದಾರೆ. ಭಾರತವು ಏಷ್ಯನ್ ಗೇಮ್ಸ್ 2023 ರಲ್ಲಿ ತನ್ನ ಛಾಪು ಮೂಡಿಸಿದ್ದು, ಇದುವರೆಗೂ ಒಟ್ಟು 71 ಪದಕಗಳನ್ನು ಪಡೆದಿದೆ.
ಜ್ಯೋತಿ-ಪ್ರವೀಣ್ 159-158 ಅಂಕಗಳಿಂದ ದಕ್ಷಿಣ ಕೊರಿಯಾ ಜೋಡಿಯನ್ನು ಒಂದು ಅಂಕದಿಂದ ಸೋಲಿಸಿದರು. ಏಷ್ಯನ್ ಗೇಮ್ಸ್‌ನಲ್ಲಿ ಆರ್ಚರಿಯಲ್ಲಿ ಇದು ಮೊದಲ ಚಿನ್ನವಾಗಿದೆ.
ಈ ಜೋಡಿ ಬುಧವಾರ ನಡೆದ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ನಿನ್ನೆ ಜ್ಯೋತಿ-ಪ್ರವೀಣ್ 159-155ರಲ್ಲಿ ಕಜಕಿಸ್ತಾನದ ಅಡೆಲ್ ಜೆಕ್ಸೆನ್‌ಬಿನೋವಾ ಮತ್ತು ಆಂಡ್ರೆ ತ್ಯುಟ್ಯುಂಟೊ ಅವರನ್ನು ಸೋಲಿಸಿದರು. ಬುಧವಾರ ನಡೆದ ಪಂದ್ಯದಲ್ಲಿ ಈ ಜೋಡಿ ಮಲೇಷ್ಯಾ ತಂಡವನ್ನು 158-155 ಅಂಕಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು.
ಇಂದು, ಭಾರತೀಯ ರೇಸ್ ವಾಕರ್‌ಗಳಾದ ಮಂಜು ರಾಣಿ ಮತ್ತು ರಾಮ್ ಬಾಬೂ ಅವರು 35 ಕಿಮೀ ರೇಸ್ ವಾಕ್ ಮಿಕ್ಸೆಡ್ ಟೀಂ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಮಿಶ್ರ ಡಬಲ್ಸ್ ಸ್ಕ್ವಾಶ್ ಸೆಮಿಫೈನಲ್‌ನಲ್ಲಿ ಭಾರತದ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ಮಲೇಷ್ಯಾದ ಐಫಾ ಅಜ್ಮಾನ್ ಮತ್ತು ಮೊಹಮ್ಮದ್ ಸಯಾಫಿಕ್ ಅವರ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಆದರೆ ಅನಾಹತ್ ಮತ್ತು ಅಭಯ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿಕೊಳ್ಳಬೇಕಾಯಿತು.