ನ್ಯೂಸ್

ಮಾರಕಾಸ್ತ್ರದಿಂದ ಯುವಕರ ಮೇಲೆ ಹಲ್ಲೆ ನಡೆಸಿದ ಎಎಸ್‌ಐ: ಗಾಯಗೊಂಡಿರುವ ಇಬ್ಬರು ಯುವಕರು

ಬೆಂಗಳೂರು: ಪೊಲೀಸ್ ಅಧಿಕಾರಿಯೊಬ್ಬರು ಮಾರಕಾಸ್ತ್ರದಿಂದ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ವಿಜಯನಗರ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಮಾಗಡಿ ರಸ್ತೆ ಠಾಣೆಯ ಎಎಸ್‌ಐ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಶ್ರೀನಿವಾಸ್ ಸಹೋದರ ಪುತ್ರ ಆನಂದ್ ಕೂಡ ದಯಾನಂದ ಮತ್ತು ಶಶಿಧರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ?
ಅ.೨೫ರ ರಾತ್ರಿ ೧೦.೩೦ ರ ಸಮಯದಲ್ಲಿ, ಬಾಪೂಜಿನಗರದ ಚೌಡಪ್ಪ ಬಡಾವಣೆಯ ನಿವಾಸಿಗಳಾದ ದಯಾನಂದ ಮತ್ತು ಶಶಿಧರ್ ಆರ್‌ಪಿಸಿ ಲೇಔಟ್‌ನ ರೈಲ್ವೆ ಟ್ರಾಕ್ ರಸ್ತೆಯ ಬಳಿ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಮತ್ತೊಂದು ಟೇಬಲ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಎಎಸ್‌ಐ ಶ್ರೀನಿವಾಸ್ ಸಹೋದರನ ಪುತ್ರ ಹಾಗೂ ಆಟೋ ಡ್ರೈವರ್ ಆನಂದ್, ಏಕಾಏಕಿ ದಯಾನಂದ ಮತ್ತು ಶಶಿಧರ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ, ಆನಂದ್, ‘ನನ್ನ ಚಿಕ್ಕಪ್ಪ ಪೊಲೀಸ್ ಅಧಿಕಾರಿ. ನೀವು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ. ಇದೇ ಏರಿಯಾದಲ್ಲೇ ನನ್ನ ಮನೆ ಇದೆ’ ಎಂದಿದ್ದಾನೆ. ಆಗ ದಯಾನಂದ ‘ನಾವು ಸಹ ಈ ಭಾಗದಲ್ಲಿಯೇ ಕೇಬಲ್ ಕಚೇರಿಯಲ್ಲಿ ಸುಮಾರು ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ನಿನ್ನನ್ನು ಎಲ್ಲೂ ನೋಡಿಲ್ಲ’ ಎಂದಿದ್ದಾನೆ. ಆಗ ಆನಂದ್ ನನ್ನ ಮೇಲೆಯೇ ಅನುಮಾನನಾ ಬಾ ನನ್ನ ಮನೆ ತೋರಿಸುತ್ತೇನೆ ಎಂದು ಹೇಳಿದ್ದಾನೆ.
ಕಳ್ಳರೆಂದು ಭಾವಿಸಿ ಹಲ್ಲೆ
ಬಳಿಕ ದಯಾನಂದ ಮತ್ತು ಶಶಿಧರನ್ನು ತನ್ನ ಆಟೋದಲ್ಲಿ ಕೂರಿಸಿಕೊಂಡು ೬ ನೇ ಮುಖ್ಯರಸ್ತೆಯಲ್ಲಿರುವ ತನ್ನ ಚಿಕ್ಕಪ್ಪನ ಮನೆ ಬಳಿ ಕರೆದೊಯ್ದು, ಏಕಾಏಕಿ ಕಳ್ಳ.. ಕಳ್ಳ… ಎಂದು ಆನಂದ್ ಜೋರಾಗಿ ಕೂಗಿಕೊಂಡಿದ್ದಾನೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಎಎಸ್‌ಐ ಶ್ರೀನಿವಾಸ್, ಲಾಠಿ ಮತ್ತು ಕಾಯಿ ಸುಲಿಯುವ ಮಚ್ಚ ಹಿಡಿದು ಹೊರಗಡೆ ಬಂದಿದ್ದಾರೆ. ಕಳ್ಳರೆಂದು ಭಾವಿಸಿ ದಯಾನಂದ ಮತ್ತು ಶಶಿಧರ್‌ಗೆ ಉಲ್ಟಾ ಮಚ್ಚಿನಿಂದ ಹೊಡೆದಿದ್ದಾರೆ. ಅದರಿಂದ ಇಬ್ಬರಿಗೂ ಗಾಯಗಳಾಗಿವೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ವಿಜಯನಗರ ಹೊಯ್ಸಳ ಸಿಬ್ಬಂದಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ದಯಾನಂದ ನೀಡಿದ ದೂರಿನ ಮೇರೆಗೆ ಎಎಸ್‌ಐ ಶ್ರೀನಿವಾಸ್ ಮತ್ತು ಸಹೋದರನ ಪುತ್ರ ಆನಂದ್ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರತಿದೂರು
ಮತ್ತೊಂದೆಡೆ ಕೇಬಲ್ ಕಚೇರಿಯಲ್ಲಿ ಕೆಲಸ ಮಾಡುವ ದಯಾನಂದ ಹಾಗೂ ಶಶಿಧರ್ ವಿರುದ್ಧವೂ ಎಎಸ್‌ಐ ಶ್ರೀನಿವಾಸ್ ದೂರು ದಾಖಲಿಸಿದ್ದಾರೆ. ದುರುದ್ದೇಶದಿಂದಲೇ ತಮ್ಮ ಮನೆ ಮುಂಭಾಗ ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪಿಸಿ ದೂರು ನೀಡಿದ್ದಾರೆ. ಪ್ರಕರಣದ ಸಂಬಂಧ ದೂರು-ಪ್ರತಿದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.