Extramarital Affairs : ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳ ನಡುವಿನ ನಂಬಿಕೆಯಿಂದ ರೂಪುಗೊಂಡು ಜೀವನಪರ್ಯಂತ ಉಳಿಯುವ ಬೆಲೆ ಕಟ್ಟಲಾಗದ ಸಂಬಂಧವಾಗಿದೆ. ಆದರೆ, ವಿವಾಹೇತರ ಸಂಬಂಧಗಳು ಇಂತಹ ಪವಿತ್ರ ಸಂಬಂಧಗಳಿಗೆ ಇಂದು ಪ್ರಮುಖ ಬೆದರಿಕೆಯಾಗಿದೆ. ಹೀಗಾಗಿ ಇಂದು ಮದುವೆ ಎಂಬ ಪವಿತ್ರ ಬಂಧಕ್ಕೆ ಇಂದು ಅರ್ಥವಿಲ್ಲದಂತಾಗಿದೆ.
ಜೀವನಪೂರ್ತಿ ಜತೆಯಾಗಿ ಹೆಜ್ಜೆ ಹಾಕುತ್ತೇನೆಂದು ಹೇಳಿ ಸಪ್ತಪದಿ ತುಳಿಯುವ ಜೋಡಿ, ಕೆಲವೇ ವರ್ಷಗಳಲ್ಲಿ ಬೇರೆಯಾಗುತ್ತವೆ. ಬಹುತೇಕರ ದಾಂಪತ್ಯ ಜೀವನ, ವಿವಾಹೇತರ ಸಂಬಂಧಗಳಿಂದಲೇ ನಾಶವಾಗಿವೆ. ವೈಯಕ್ತಿಕವಾಗಿ ಗೊತ್ತಿರುವವರು, ಒಂದೇ ಕಚೇರಿಯಲ್ಲಿ ಕೆಲಸ ಮಾಡುವವರು ಮತ್ತು ಸಾಮಾಜಿಕ ಜಾಲತಾಣದ ಮೂಲಕ ಭೇಟಿಯಾಗುವ ಪುರುಷರು ಮತ್ತು ಮಹಿಳೆಯರು ಪರಸ್ಪರ ಹತ್ತಿರವಾಗುತ್ತಾರೆ. ಸ್ನೇಹ ಬೆಳೆದಂತೆ ಅದು ಪ್ರೀತಿಯಾಗಿ ಬದಲಾಗಲು ಪ್ರಾರಂಭಿಸುತ್ತದೆ. ಮೊಬೈಲ್ ಫೋನ್ ಮೂಲಕ ಚಾಟ್ ಮಾಡುವುದರಿಂದ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ವಿವಾಹೇತರ ಸಂಬಂಧಗಳು ಹೆಚ್ಚಾಗಿವೆ. ಇದರಿಂದಾಗಿ ನಗರದಲ್ಲಿ ಕೊಲೆಗಳ ಸಂಖ್ಯೆಯೂ ಹೆಚ್ಚಳವಾಗಿರುವುದು ಬಹಳ ಕಳವಳಕಾರಿ ವಿಷಯವಾಗಿದೆ. ಈ ಪ್ರಕ್ರಿಯೆಯಲ್ಲಿ, ಕೆಲವರು ತಮ್ಮ ಸಂಗಾತಿಯನ್ನು ಕೊಲೆ ಮಾಡಲು ಹಿಂಜರಿಯುವುದಿಲ್ಲ. ನವವಿವಾಹಿತ ದಂಪತಿಯಿಂದ ಹಿಡಿದು ಮೂರು ದಶಕಗಳಿಂದ ಒಟ್ಟಿಗೆ ವಾಸಿಸುತ್ತಿರುವವರವರೆಗೆ ಎಲ್ಲಾ ವಯಸ್ಸಿನ ಜನರು ಈ ಹಾದಿಯನ್ನು ಹಿಡಿಯುತ್ತಿದ್ದಾರೆ ಎಂದು ಅಂಕಿ-ಅಂಶಗಳು ತೋರಿಸುತ್ತವೆ.
ದೇಶದಲ್ಲಿ ಅತಿ ಹೆಚ್ಚು ವಿವಾಹೇತರ ಸಂಬಂಧಗಳು ಎಲ್ಲಿ ವರದಿಯಾಗಿವೆ ಎಂಬುದು ನಿಮಗೆ ಗೊತ್ತಿದೆಯೇ? ಈ ಪ್ರಶ್ನೆ ಕೇಳಿದಾಗ ಬಹುತೇಕ ಮಂದಿಯ ತೆಲೆಗೆ ಬರುವ ಹೆಸರುಗಳೆಂದರೆ, ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಗುರುಗ್ರಾಮ್, ಬೆಂಗಳೂರು, ಚೆನ್ನೈ ಹಾಗೂ ಕೋಲ್ಕತ. ಆದರೆ, ಇದ್ಯಾವುದು ಅಲ್ಲ. ಈ ಒಂದು ಸ್ಥಳ ನಮ್ಮ ಹತ್ತಿರದಲ್ಲೇ ಇದೆ. ಅದ್ಯಾವುದು ಎಂಬುದನ್ನು ನಾವೀಗ ತಿಳಿಯೋಣ.
ವಿವಾಹಿತ ಡೇಟಿಂಗ್ ಅಪ್ಲಿಕೇಶನ್ ಆಶ್ಲೇ ಮ್ಯಾಡಿಸನ್‌ನ 2025ರ ಜೂನ್ ತಿಂಗಳ ಬಳಕೆದಾರರ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ವಿವಾಹೇತರ ಸಂಬಂಧಗಳ ನೋಂದಣಿಗಳು ತಮಿಳುನಾಡಿನ ಕಾಂಚೀಪುರಂನಿಂದ ಬಂದಿವೆ. ಮೊದಲ ಸ್ಥಾನದಲ್ಲಿರುವ ಕಾಂಚೀಪುರಂ, ದೆಹಲಿ, ಬೆಂಗಳೂರು, ಕೊಲ್ಕತ್ತ, ಚೆನ್ನೈ ಮತ್ತು ಮುಂಬೈನಂತಹ ಮೆಟ್ರೋ ನಗರಗಳನ್ನು ಸಹ ಮೀರಿಸಿದೆ. 2024ರಲ್ಲಿ ಈ ನಗರವು 17ನೇ ಸ್ಥಾನದಲ್ಲಿತ್ತು. ಇದೀಗ ಒಂದೇ ಬಾರಿಗೆ ಮೊದಲ ಸ್ಥಾನದಲ್ಲಿದ್ದು, ಎಲ್ಲರನ್ನೂ ಅಚ್ಚರಿಗೆ ದೂಡಿದೆ.
ಈ ಅಪ್ಲಿಕೇಶನ್ ಅನ್ನು ಹೆಚ್ಚು ಬಳಸುವ ಟಾಪ್ ಇಪ್ಪತ್ತು ಭಾರತೀಯ ಜಿಲ್ಲೆಗಳ ಪಟ್ಟಿಯಲ್ಲಿ ದೆಹಲಿಯ ಆರು ಜಿಲ್ಲೆಗಳು ಸ್ಥಾನ ಪಡೆದಿವೆ. ಕಾಂಚೀಪುರಂ ನಂತರ ಮಧ್ಯ ದೆಹಲಿ ಎರಡನೇ ಸ್ಥಾನದಲ್ಲಿದೆ. ಇದಲ್ಲದೆ, ಗುರುಗಾಂವ್, ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರ (ನೋಯ್ಡಾ) ನಂತಹ ನಗರಗಳು ಸಹ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಆಶ್ಲೇ ಮ್ಯಾಡಿಸನ್ ಈ ಕುಖ್ಯಾತ ಪಟ್ಟಿಯನ್ನು ತಮ್ಮ ಆ್ಯಪ್ನಲ್ಲಿ ಸೈನ್ ಅಪ್ ಮಾಡಿದ ಜನರ ಸಂಖ್ಯೆ ಮತ್ತು ಚಟುವಟಿಕೆಯ ತೀವ್ರತೆ ಮತ್ತು ತೊಡಗಿಸಿಕೊಳ್ಳುವಿಕೆಯ ಡೇಟಾವನ್ನು ಆಧರಿಸಿ ಸಂಗ್ರಹಿಸಿದೆ. ಅಚ್ಚರಿಯ ಸಂಗತಿ ಏನೆಂದರೆ, ವಾಣಿಜ್ಯ ನಗರಿ ಮುಂಬೈ ಮೊದಲ 20ರಲ್ಲಿ ಸ್ಥಾನ ಪಡೆದಿಲ್ಲ. ಇತರ ಸಣ್ಣ ನಗರಗಳಲ್ಲಿ ಜೈಪುರ, ಚಂಡೀಗಢ, ರಾಯ್‌ಗಢ ಮತ್ತು ಕಾಮರೂಪ್ ಪಟ್ಟಿಯಲ್ಲಿವೆ.
ಆಶ್ಲೇ ಮ್ಯಾಡಿಸನ್‌ನ ಪಟ್ಟಿಯು ಭಾರತದ ಸಣ್ಣ ನಗರಗಳಲ್ಲಿಯೂ ದಾಂಪತ್ಯ ದ್ರೋಹದ ಬೆಳೆಯುತ್ತಿರುವ ಟ್ರೆಂಡ್ ಅನ್ನು ತೋರಿಸುತ್ತಿದೆ. ಈ ವಿಚಾರವಾಗಿ ಆಶ್ಲೇ ಮ್ಯಾಡಿಸನ್‌ನ ಸಿಇಒ ಪಾಲ್ ಕೀಬಲ್ ಮಾತನಾಡಿ, ಭಾರತವು ಆಧುನಿಕ ಸಂಬಂಧಗಳನ್ನು ಮರು ವ್ಯಾಖ್ಯಾನಿಸುವಲ್ಲಿ ಮುನ್ನಡೆಸುತ್ತಿದೆ ಮತ್ತು ಸಮೀಕ್ಷೆಗೊಳಗಾದ ವಯಸ್ಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ದಾಂಪತ್ಯ ದ್ರೋಹವನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ದತ್ತಾಂಶವು ಎತ್ತಿ ತೋರಿಸುತ್ತದೆ. ಅಲ್ಲದೆ, ಜಾಗತಿಕವಾಗಿ ಭಾರತವು ಆರನೇ ಸ್ಥಾನದಲ್ಲಿದೆ. ವರ್ಷದ ಅಂತ್ಯದ ವೇಳೆಗೆ ಇಂತಹ ಸಂಬಂಧಗಳ ಸಂಖ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ. ಈ ಸಂಖ್ಯೆಗಳನ್ನು ಗಮನಿಸಿದರೆ ಭಾರತದಲ್ಲಿ ಏಕಪತ್ನಿತ್ವ ಇಲ್ಲದಿರುವಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತವೆ ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಆಶ್ಲೇ ಮ್ಯಾಡಿಸನ್ YouGov ಸಮೀಕ್ಷೆಯನ್ನು ಹಂಚಿಕೊಂಡಿತು. ಇದರಲ್ಲಿ ಸಮೀಕ್ಷೆಗೆ ಒಳಗಾದ ಭಾರತೀಯರಲ್ಲಿ ಶೇ. 53 ರಷ್ಟು ಜನರು ತಮ್ಮ ಸಂಗಾತಿಗೆ ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಜಾಗತಿಕವಾಗಿ ದಾಂಪತ್ಯ ದ್ರೋಹವನ್ನು ಒಪ್ಪಿಕೊಂಡ ವಯಸ್ಕರ ದರದಲ್ಲಿ ಬ್ರೆಜಿಲ್ ಭಾರತದ ಸನಿಹದಲ್ಲಿದೆ. ಅಂದಹಾಗೆ, ವಿವಾಹಿತರು ವಿವಾಹೇತರ ಸಂಬಂಧಗಳನ್ನು ಹೊಂದಲು ಸಹಾಯ ಮಾಡುವ ಈ ಅಪ್ಲಿಕೇಶನ್ 2000ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು. "ಲೈಫ್ ಈಸ್ ಶಾರ್ಟ್, ಹ್ಯಾವ್ ಆನ್ ಅಫೇರ್" ಎಂಬ ತನ್ನ ಟ್ಯಾಗ್‌ಲೈನ್ ಮೂಲಕ ಪ್ರಪಂಚದಾದ್ಯಂತ ಹಲವಾರು ಜನರನ್ನು ಈ ಆ್ಯಪ್ ಆಕರ್ಷಿಸಿದೆ. ಭಾರತದಲ್ಲಿ, ಈ ಅಪ್ಲಿಕೇಶನ್ ತನ್ನ ಅಸ್ತಿತ್ವವನ್ನು ಅಷ್ಟಾಗಿ ಪ್ರಚಾರ ಮಾಡಲಿಲ್ಲ. ಇದರ ಹೊರತಾಗಿಯೂ, ಭಾರತೀಯರಿಂದ ಸೈನ್‌ಅಪ್‌ಗಳಲ್ಲಿ ಇದು ಹೆಚ್ಚಳವನ್ನು ಕಂಡಿದೆ. ಸೈನ್-ಅಪ್‌ಗಳಲ್ಲಿ ಭಾರತ ಎಂಟನೇ ಸ್ಥಾನದಲ್ಲಿದೆ. (ಏಜೆನ್ಸೀಸ್)