ವಿಶ್ವ ಕಿರಿಯರ ಅಥ್ಲೆಟಿಕ್ಸ್: ಆಶಿಶ್ ಯಾದವ್ಗೆ ರಜತ ಹಾರ, ಫೈನಲ್ಗೇರಿದ ಪೂಜಾ ಸಿಂಗ್
ಯುಜೀನ್ (ಅಮೆರಿಕ): ಭಾರತದ ಆಶಿಶ್ ಯಾದವ್ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ (
World Athletics U20 Championship
) ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ರಜತ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಒಲಿಂಪಿಕ್ಸ್ ಅವಳಿ ಪದಕ ಸಾಧಕ ನೀರಜ್ ಚೋಪ್ರಾ ಬಳಿಕ ಈ ಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಸಾಧಕ ಎನಿಸಿದ್ದಾರೆ. ನೀರಜ್ ಚೋಪ್ರಾ 2016ರ ಆವೃತ್ತಿಯಲ್ಲಿ ಸ್ವರ್ಣ ಪದಕ ಜಯಿಸಿದ್ದರು.
ಉತ್ತರ ಪ್ರದೇಶದ 19 ವರ್ಷದ ಆಶಿಶ್ ಯಾದವ್ ಮೂರನೇ ಎಸೆತದಲ್ಲಿ ಸರ್ವಾಧಿಕ 74.09 ಮೀ. ದೂರ ಜಾವೆಲಿನ್ ಎಸೆದರು. ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯ ಟಿ. ಧರಣೀಧರನ್ 72.35 ಮೀ. ಎಸೆತದೊಂದಿಗೆ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು.
74.49 ಮೀ. ಎಸೆತದ ವೈಯಕ್ತಿಕ ಶ್ರೇಷ್ಠ ದಾಖಲೆ ಹೊಂದಿರುವ ಆಶಿಶ್, ಅದಕ್ಕಿಂತ 40 ಸೆಂಟಿ ಮೀಟರ್ ಕಡಿಮೆ ದೂರ ಎಸೆದರು. ಈ ಸ್ಪರ್ಧೆಯ ಫೇವರಿಟ್ ಎನಿಸಿದ್ದ ದ. ಆಫ್ರಿಕಾದ ಜಾನ್ ಹೆಂಡ್ರಿಕ್ ಹೇಮನ್ಸ್ 80.50 ಮೀ. ದೂರದ ಎಸೆತದೊಂದಿಗೆ ನಿರೀಕ್ಷೆಯಂತೆಯೇ ಚಿನ್ನದ ಪದಕ ಬಾಚಿಕೊಂಡರೆ, ಡೊಮಿನಿಕಾದ ಆಡಿಸನ್ ಜೇಮ್ಸ್ 73.89 ಮೀ. ಎಸೆತದೊಂದಿಗೆ ಕಂಚು ಜಯಿಸಿದರು.
ಪುರುಷರ 400 ಮೀ. ಓಟದ ಹೀಟ್ಸ್ನಲ್ಲಿ 20 ವಯೋಮಿತಿಯ ರಾಷ್ಟ್ರೀಯ ದಾಖಲೆ ಬರೆದಿದ್ದ ಕೇರಳದ ಮೊಹಮ್ಮದ್ ಅಶ್ಫಕ್ ಶುಕ್ರವಾರ ರಾತ್ರಿ ನಡೆದ ಫೈನಲ್ನಲ್ಲಿ 46.20 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಪೂನಂ ಗರಿಷ್ಠ 48.81 ಮೀ. ಎಸೆತದೊಂದಿಗೆ ಫೈನಲ್ ಪ್ರವೇಶಿಸಲು ವಿಫಲರಾಗಿ, 13ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ರಾಷ್ಟ್ರೀಯ ಸೀನಿಯರ್ ದಾಖಲೆ ಹೊಂದಿರುವ ಪೂಜಾ ಸಿಂಗ್ ಮಹಿಳೆಯರ ಹೈಜಂಪ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದು, ಮತ್ತೊಂದು ಪದಕದ ನಿರೀಕ್ಷೆ ಮೂಡಿಸಿದ್ದಾರೆ. 19 ವರ್ಷದ ಪೂಜಾ 1.79 ಮೀ. ಎತ್ತರ ಜಿಗಿದರು. ಇದರಿಂದ ಅವರು ಫೈನಲ್ಗೆ ನೇರಪ್ರವೇಶ ಪಡೆದರು. ಪೂಜಾ 1.93 ಮೀ. ಎತ್ತರ ಜಿಗಿತದ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. ಪುರುಷರ ಲಾಂಗ್ಜಂಪ್ನಲ್ಲಿ ಶಹನ್ವಾಜ್ ಖಾನ್ (7.73 ಮೀ) ಮತ್ತು ಜತಿನ್ ಅರ್ಜುನ (7.57 ಮೀ.) ಕ್ರಮವಾಗಿ 5 ಮತ್ತು 12ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದರು.