ನ್ಯೂಸ್

ಕಣ್ಣುಗಳ ಅರೈಕೆಗಾಗಿ ‘ಆಶಾಕಿರಣ’ ಆಂದೋಲನಕ್ಕೆ ಚಾಲನೆ

ಪಂಕಜ ಕೆ.ಎಂ.

ಬೆಂಗಳೂರು: ಜನರ ಮನೆ ಬಾಗಿಲಿಗೆ ಕಣ್ಣಿನ ಆರೈಕೆಯ ಸೇವೆ ಒದಗಿಸುವ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ‘ಆಶಾಕಿರಣ’ ಆಂದೋಲನ ಕೈಗೊಂಡಿದೆ. ಆಂದೋಲನಕ್ಕೆ ಚಿಕ್ಕಬಳ್ಳಾಪುರದಲ್ಲಿ ಚಾಲನೆ ದೊರೆತಿದ್ದು, ಸೆ. 4ರಂದು ಕಲಬುರಗಿ, ಹಾವೇರಿ ಮತ್ತು ಚಾಮರಾಜನಗರ ಜಿಲ್ಲೆಗಳಿಗೂ ವಿಸ್ತರಣೆಗೊಳ್ಳಲಿದೆ.

ಜನಸಾಮಾನ್ಯರಲ್ಲಿ ಕಣ್ಣಿನ ಆರೋಗ್ಯ ಮತ್ತು ನೇತ್ರದಾನದ ಕುರಿತು ಜಾಗೃತಿ ಮೂಡಿಸುವುದು ಆಂದೋಲನದ ಉದ್ದೇಶವಾಗಿದ್ದು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ಮನೆಗೆ ಭೇಟಿ ನೀಡಿ ಕುಟುಂಬದ ಎಲ್ಲ ಸದಸ್ಯರು ಕಣ್ಣಿನ ತಪಾಸಣೆ ನಡೆಸಲಿದ್ದಾರೆ. ಈ ವೇಳೆ ಕಣ್ಣಿನ ಪೊರೆ, ಸೋಂಕು ಅಥವಾ ಗಾಯ, ದೃಷ್ಟಿದೋಷ ಸೇರಿ ಯಾವುದೇ ಸಮಸ್ಯೆಗಳು ಕಂಡು ಬಂದರೆ ಅಂಥವರನ್ನು ಮುಂದಿನ ಹಂತದಲ್ಲಿ ನೇತ್ರಾಧಿಕಾರಿಗಳು ಪರೀಕ್ಷಿಸಲಿದ್ದಾರೆ. ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಯ ಅಗತ್ಯ ಇರುವವರಿಗೆ ಸರ್ಕಾರಿ ತಾಲ್ಲೂಕು ಅಥವಾ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ದೃಷ್ಟಿ ಸಮಸ್ಯೆ ಇರುವವರಿಗೆ ಶಸಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಸೇರಿ ಎಲ್ಲಾ ಸೇವೆಗಳು ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು.

ಜೀವನಶೈಲಿ ಸಮಸ್ಯೆ: ಬದಲಾದ ಜೀವನ ಶೈಲಿ, ಆಹಾರ ಕ್ರಮ, ವಾಯುಮಾಲಿನ್ಯ, ಹವಾಮಾನ ಬದಲಾವಣೆ, ಒತ್ತಡದ ಜೀವನ ಹೀಗೆ ನಾನಾ ಕಾರಣಗಳಿಂದ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿ ಅಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿದೆ. ಇದರೊಂದಿಗೆ ಟಿವಿ, ಮೊಬೈಲ್, ಕಂಪ್ಯೂಟರ್ ಅತಿಯಾದ ಬಳಕೆ ದೃಷ್ಟಿ ಸಮಸ್ಯೆಗೆ ಕಾರಣವಾಗಿದೆ. ಅಭಿಯಾನದ ವೇಳೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.