ತೀರ್ಥಹಳ್ಳಿ: ಕಳೆದ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸಿರುವ ಆಶಾ ಮೇಲ್ವಿಚಾರಕರನ್ನು ಕೆಲಸದಿಂದ ತೆಗೆದು ಹಾಕಿರುವ ಸರ್ಕಾರದ ನಿರ್ಧಾರ ಖಂಡನೀಯ. ಕೂಡಲೇ ಅವರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪಟ್ಟಣದ ಗ್ರಾಮೀಣ ಸೌಧದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕರೊನಾ ಸಂದರ್ಭ ಜನರ ಜೀವ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ನಮ್ಮನ್ನು ರಾಜ್ಯ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಅಮಾನವೀಯ. ಯಾವುದೇ ಮುನ್ಸೂಚನೆ ಮತ್ತು ಸವಲತ್ತನ್ನೂ ನೀಡದೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಲೆನಾಡು ಭಾಗದಲ್ಲಿ ಗರ್ಭಿಣಿ, ಬಾಣಂತಿಯರ ಆರೈಕೆಯ ಆಧಾರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಅಂಕ ನೀಡುವ ಮತ್ತು ಸಾವಿರ ಜನರಿಗೆ ಒಬ್ಬ ಕಾರ್ಯಕರ್ತೆ ಎಂಬ ಉದ್ದೇಶಿತ ಕಾಯ್ದೆ ಈ ಭಾಗಕ್ಕೆ ಅವೈಜ್ಞಾನಿಕ. ರಾಜ್ಯದ ಬೇರೆ ಭಾಗಗಳಂತೆ ಮಲೆನಾಡು ಪ್ರದೇಶದಲ್ಲಿ ಜನಸಂಖ್ಯೆ ವಿರಳ. ಈ ನಿಯಮವನ್ನು ಮಲೆನಾಡು ಭಾಗಕ್ಕೆ ಅನ್ವಯವಾಗದಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪ್ರೇಮಾ, ಕಾರ್ಯದರ್ಶಿ ವಿನೋದಾ, ಇತರರಿದ್ದರು.