ನ್ಯೂಸ್

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಕೆ.ಆರ್.ನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಬುಧವಾರ ಪಟ್ಟಣದ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಕೋವಿಡ್‌ಗೆ ದೇಶವೇ ನಲುಗಿದ್ದು, ಈ ವೇಳೆ ಜೀವದ ಹಂಗು ತೊರೆದು ಕರೊನಾ ಸಂಕಷ್ಟದಲ್ಲಿ ಸೇನಾನಿಗಳಾಗಿ ದಿನವಿಡೀ ಸಾರ್ವಜನಿಕರ ಸೇವೆ ಮಾಡುತ್ತಿದ್ದೇವೆ. ಆದರೂ ಸರ್ಕಾರ 12 ಸಾವಿರ ರೂ. ವೇತನ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.

ಈಗಾಗಲೇ ರಾಜ್ಯಾದಂತ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿದೆ. ಆದರೂ ಸರ್ಕಾರ ಮೀನಮೇಷ ಏಣಿಸುತ್ತಿದೆ. ಸಾವಿರಾರು ಕೋಟಿ ರೂ.ಗಳನ್ನು ಕರೊನಾ ತಡೆಗಟ್ಟಲು ವೆಚ್ಚ ಮಾಡುತ್ತಿದ್ದು, ತಮ್ಮಗೆ ಗೌರವಧನ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕೆಲಸವನ್ನು ಬಹಿಷ್ಕರಿಸಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ನಂತರ ಉಪತಹಸೀಲ್ದಾರ್ ಡಿ.ಎ.ಪುಟ್ಟುರಾಜ್ ಅವರಿಗೆ ಮನವಿ ಸಲ್ಲಿಸಿದರು. ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್, ಎಪಿಎಂಸಿ ಮಾಜಿ ಸದಸ್ಯ ಹೆಬ್ಬಾಳು ಶೇಖರ್, ಆಶಾ ಕಾರ್ಯಕರ್ತೆಯರ ತಾಲೂಕು ಘಟಕದ ಕಾರ್ಯದರ್ಶಿ ಬಿ.ಎ.ಸುಮತಿ, ಸದಸ್ಯರಾದ ಎಸ್.ಎ.ಮಂಜುಳಾ, ಕಮಲಾಕ್ಷಿ, ಕೆ.ಆರ್.ಮಂಜುಳಾ, ಸುಂದರಮ್ಮ, ಎಸ್.ಎನ್.ಆಶಾ, ಶಶಿಕಲಾ, ಶಾಂತ, ಸಲಹೆಗಾರ ಎಸ್.ಎಚ್.ಹರೀಶ್ ಇತರರು ಇದ್ದರು.