ನ್ಯೂಸ್

ಆಶಾ ಕಾರ್ಯಕರ್ತೆಯರಿಗೇಕೆ ತಾರತಮ್ಯ: ಕೇಂದ್ರದ ವಿರುದ್ಧ ಡಿ.ಕೆ. ಸುರೇಶ್ ಕಿಡಿ

Ramanagara

ಹಾರೋಹಳ್ಳಿ : ಪ್ರತಿಯೊಬ್ಬ ಕಾರ್ಮಿಕರಿಗೂ, ನೌಕರರಿಗೂ ಕನಿಷ್ಠ ವೇತನ ನಿಗದಿ ಮಾಡಿರುವ ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರಿಗೇಕೆ ತಾರತಮ್ಯ ಮಾಡುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಹಾರೋಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯ ಸಭಾಂಗಣದಲ್ಲಿ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರಿಗೆ ಶನಿವಾರ ಆಹಾರ ಕಿಟ್ ವಿತರಣೆ ಮತ್ತು ಬಮುಲ್ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರೊನಾ ಮಹಾಮಾರಿ ವಿರುದ್ಧ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನಿಗದಿ ಮಾಡಿಲ್ಲ ಇವರಿಗೆ ಪರಿಜ್ಞಾನವಿಲ್ಲವೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಮನೆ ಮನೆಗೆ ತೆರಳಿ ಗ್ರಾಮದ ಜನರು ಬೈಯ್ದರೂ ಸಹ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದು, ಮನೆಯಲ್ಲಿಯೂ ಇವರನ್ನು ಹೊರಗಿನವರಂತೆ ಕಾಣಲಾಗುತ್ತಿದೆ. ಜೀವನದ ಭದ್ರತೆಯೂ ಇಲ್ಲದಾಗಿದ್ದು ಸರ್ಕಾರಗಳು ಈ ಬಗ್ಗೆ ಚಿಂತಿಸಬೇಕಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆಶಾ ಕಾರ್ಯಕರ್ತೆಯರಿಗೆ ಜೀವನ ಭದ್ರತೆ ಜತೆಗೆ ಕನಿಷ್ಠ ವೇತನ ನಿಗದಿ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮಾತನಾಡಿ, ಜೀವನದ ಸಂಕಷ್ಟದ ಸಮಯದಲ್ಲಿ ವಿಶೇಷವಾಗಿ ಆಶಾ ಕಾರ್ಯಕರ್ತೆಯರು ಸೇವೆ ಮಾಡುತ್ತಿದ್ದು, ಪ್ರಾಣದ ಹಂಗು ತೊರೆದು ಇತರರ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿರುವುದು ಅಭಿನಂದನೀಯ. ಕರೊನಾ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವೈಲ್ಯ ಕಂಡಿದೆ ಎಂದರು.

ಬಮುಲ್ ನಿರ್ದೇಶಕ ಎಚ್.ಎಸ್.ಹರೀಶ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆಸಿಬಿ ಅಶೋಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೀರಣಗೆರೆ ಜಗದೀಶ್, ತಾಪಂ ಮಾಜಿ ಸದಸ್ಯೆ ಗೀತಾ ಈಶ್ವರ್, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಗುರುಪ್ರಸಾದ್ ಮುಂತಾದವರು ಇದ್ದರು.

ಪರಿಶ್ರಮದಿಂದ ಅಭ್ಯಾಸ ಮಾಡಿ : ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪರಿಶ್ರಮದಿಂದ ಅಭ್ಯಾಸ ಮಾಡಬೇಕಿದೆ. ಯಾಕೆಂದರೆ ಆನ್‌ಲೈನ್ ತರಗತಿಗಳು ನಿಮಗೆ ಹೊಸದು. ತರಗತಿಗೂ ಆನ್‌ಲೈನ್ ಕ್ಲಾಸ್‌ಗೂ ಬಹಳ ವ್ಯತ್ಯಾಸವಿದ್ದು, ಗಮನವಿಟ್ಟು ಓದಿ ಭವಿಷ್ಯದ ಪ್ರಜೆಗಳಾಗಿ ನಾಡಿಗೆ ಮತ್ತು ನಿಮ್ಮ ಹೆತ್ತವರಿಗೆ ಕೀರ್ತಿ ತರಬೇಕು ಎಂದು ಹೇಳಿದರು.

ಬಮುಲ್ ವತಿಯಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ಭಾಗದ 200 ವಿದ್ಯಾರ್ಥಿಗಳಿಗೆ ಸುಮಾರು 9 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಸುರೇಶ್ ತಿಳಿಸಿದರು.