ನ್ಯೂಸ್

ಪೊಲೀಸ್​ ಠಾಣೆ & ಮದ್ಯಕ್ಕೆ ಮಾತ್ರ ಅವರ ಬಳಿ ಹಣವಿದೆ; ಯೋಗಿ ಸರ್ಕಾರದ ವಿರುದ್ಧ ಓವೈಸಿ ವ್ಯಂಗ್ಯ | Asaduddin Owaisi

ಹೈದರಾಬಾದ್​​: ಸಂಭಾಲ್‌ನ ಜಾಮಾ ಮಸೀದಿ ಬಳಿ ಪೊಲೀಸ್ ಠಾಣೆ ನಿರ್ಮಿಸುತ್ತಿರುವ ಕುರಿತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ಶನಿವಾರ(ಡಿಸೆಂಬರ್​ 28) ವ್ಯಂಗ್ಯವಾಡಿದ್ದಾರೆ. ಯೋಗಿ ಆದಿತ್ಯನಾಥ್​​ ಆಡಳಿತವನ್ನು ಗುರಿಯಾಗಿಸಿಕೊಂಡು ಸರ್ಕಾರದ ಬಳಿ ಬೇರೆ ಯಾವುದಕ್ಕೂ ಹಣವಿಲ್ಲ, ಪೊಲೀಸ್ ಠಾಣೆ ಮತ್ತು ಮದ್ಯಕ್ಕೆ ಮಾತ್ರ ಹಣವಿದೆ ಎಂದು ಹೇಳಿದರು.

ದೇಶದ ಯಾವುದೇ ಮೂಲೆಗೆ ಹೋದರೂ ಅಲ್ಲಿನ ಸರ್ಕಾರ ಶಾಲೆಗಳನ್ನಾಗಲಿ ಆಸ್ಪತ್ರೆಗಳನ್ನಾಗಲಿ ತೆರೆಯುವುದಿಲ್ಲ. ಏನಾದ್ರೂ ಕಟ್ಟಿದ್ದರೆ ಅದು ಪೊಲೀಸ್ ಠಾಣೆ ಮತ್ತು ಬಾರ್​ ಮಾತ್ರ ಆಗಿರುತ್ತದೆ. ಅದೇರಾಜ್ಯದ ಮುಸ್ಲಿಂ ಜನಸಂಖ್ಯೆಯ ಪ್ರದೇಶಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು,

ಪೊಲೀಸ್ ಠಾಣೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಅರ್ಚಕ ಶೋಭಿತ್ ಶಾಸ್ತ್ರಿ ಮಾತನಾಡಿ, ಪೊಲೀಸ್ ಠಾಣೆ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಯಿತು. ವಾಸ್ತು ದೋಷಗಳು ಉಳಿಯದಿರಲಿ ಎಂಬ ಉದ್ದೇಶದಿಂದ ಪೂಜೆಯನ್ನೂ ಮಾಡಲಾಗಿದೆ ಎಂದು ಹೇಳಿದರು.

ನವೆಂಬರ್ 24ರಂದು ನ್ಯಾಯಾಲಯದ ಆದೇಶದ ಮೇರೆಗೆ ಸರ್ವೆ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಸಂಭಾಲ್‌ನ ಜಾಮಾ ಮಸೀದಿಯಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು. ಆ ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಭದ್ರತೆಯ ದೃಷ್ಟಿಯಿಂದ ಈ ಠಾಣೆಯನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಜನರ ಬೇಡಿಕೆಯಿದ್ದು ಹೀಗಾಗಿ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಶ್ರೀಶ್ ಚಂದ್ರ ತಿಳಿಸಿದ್ದಾರೆ.(ಏಜೆನ್ಸೀಸ್​​)