ನವದೆಹಲಿ: 18ನೇ ಲೋಕಸಭೆಯಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಮಾಣವಚನ ಸ್ವೀಕಾರ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಓವೈಸಿ ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ್ದಾರೆ. ಹೈದರಾಬಾದ್ ಸಂಸದ ಓವೈಸಿ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ ನಂತರ ಸಂಸತ್ತಿನೊಳಗೆ ಮತ್ತು ಹೊರಗೆ ಕೋಲಾಹಲ ಎದ್ದಿದೆ.
ಓವೈಸಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗುತ್ತಲೇ ಆಡಳಿತ ಪಕ್ಷದ ಸದಸ್ಯರು ವಿರೋಧ ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ಪ್ರಕ್ರಿಯಾ ಅಧಿಕಾರಿ ರಾಧಾಮೋಹನ್ ಸಿಂಗ್, ಘೋಷಣೆಯನ್ನು ದಾಖಲೆಯಿಂದ ತೆಗೆದುಹಾಕುವಂತೆ ಸೂಚನೆ ನೀಡಿದರು.
2019 ರಲ್ಲಿ, ಓವೈಸಿ ತಮ್ಮ ಪ್ರಮಾಣವಚನವನ್ನು "ಜೈ ಭೀಮ್, ಅಲ್ಲಾ-ಓ-ಅಕ್ಬರ್ ಮತ್ತು ಜೈ ಹಿಂದ್" ಎಂಬ ಪದಗಳೊಂದಿಗೆ ಮುಕ್ತಾಯಗೊಳಿಸಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರನ್ನು ಓವೈಸಿ ಸೋಲಿಸಿದರು. ಅವರ ಘೋಷಣೆಯ ಬಗ್ಗೆ ವಿವಾದ ಭುಗಿಲೆದ್ದಂತೆ, ಓವೈಸಿ ಅವರು 'ಜೈ ಪ್ಯಾಲೆಸ್ತೀನ್' ಎಂದು ಹೇಳಲು ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.