ನ್ಯೂಸ್

ದೇಶದ ವಿದ್ಯಮಾನದ ಚರ್ಚೆಯಂತೆ!; ಜಾರಕಿಹೊಳಿ ಭೇಟಿ ಮಾಡಿದ ಡಿಕೆಸು

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಚಿವರನ್ನು ಭೇಟಿ ಮಾಡಿದ ಬೆನ್ನಲ್ಲೇ ಡಿ.ಕೆ.ಸುರೇಶ್ ಕೂಡ ಧಾವಿಸಿದ್ದು ವಿಶೇಷವಾಗಿ ಕಾಣಿಸಿತು.
ಅವರು ಪ್ರಭಾವಿ ಸಚಿವರು, ಹಿರಿಯ ನಾಯಕರು. ಕನಕಪುರ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಭೇಟಿ ಮಾಡಿದ್ದೆ, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಮ್ಮ ಭೇಟಿ ಬಗ್ಗೆ ಡಿ.ಕೆ.ಸುರೇಶ್ ಸಮಜಾಯಿಷಿ ನೀಡಿದರಲ್ಲದೇ, ಸತೀಶ್ ಜಾರಕಿಹೊಳಿ ಜತೆ ದೇಶದ ವಿದ್ಯಮಾನಗಳ ಬಗ್ಗೆ ಮಾತಾಡಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಹಾಗೆಯೇ, ನಮ್ಮ ಪಕ್ಷದವರನ್ನು ನಾವು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಪಕ್ಷ, ರಾಜಕೀಯ, ಅಭಿವೃದ್ಧಿ ಬಗ್ಗೆ ಮಾತನಾಡಲು ಹೋದರೂ ಅನುಮಾನದಿಂದ ನೋಡಿದರೆ ಹೇಗೆ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
ಅವಧಿ ಮುಗಿಯೋವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಮೂಡ ಸಂಬಂಧ ತನಿಖೆ ನಡೆಯುತ್ತಿದೆ. ಸಿಎಂ ಅವರೇ ತನಿಖೆಗೆ ಮುಕ್ತ ಅವಕಾಶ ನೀಡಿದ್ದಾರೆ. ಸಿಎಂ ಹಾಗೂ ಸರ್ಕಾರ ಕಳಂಕ ಮುಕ್ತವಾಗಿ ಹೊರ ಬರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಮುಖ್ಯಮಂತಿಯವರನ್ನು ಜಾರಿ ನಿರ್ದೇಶನಾಲಯದವರು ಹೇಗೆ ಬಂಧಿಸುತ್ತಾರೆ? ಇಡಿ ಇಸಿಐಆರ್ ಮಾಡಿದ ತಕ್ಷಣ ಬಂಧಿಸಬೇಕು ಅಂತಾ ಏನಾದರೂ ಇದೆಯೇ? ಸಿಎಂ ಸಿದ್ದರಾಮಯ್ಯ ತನಿಖೆ ಎದುರಿಸುತ್ತಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.