ಅಥಣಿ ಪಟ್ಟಣದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಸಲ್ಲಿಸಲಾಯಿತು. ಮರುಳಸಿದ್ದ ಸ್ವಾಮೀಜಿ, ಸದಾಶಿವ ಬುಟಾಳೆ, ಶಿವಾನಂದ ದಿವಾನಮಳ, ರಾವಸಾಬ ಐಹೊಳೆ ಇತರರಿದ್ದರು. 
ನ್ಯೂಸ್

ನುಡಿದಂತೆ ನಡೆದ ಶತಮಾನದ ಸಂತ

ಪ್ರಶಾಂತ ಹೂಗಾರ

ಅಥಣಿ: ನುಡಿದಂತೆ ನುಡಿದ ಸಂತ ಶ್ರೀ ಸಿದ್ದೇಶ್ವರ ಶ್ರೀಗಳ ಆದರ್ಶ ಎಲ್ಲರಿಗೂ ದಾರಿದೀಪವಾಗಿದೆ ಎಂದು ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಿದ್ದೇಶ್ವರ ಶ್ರೀಗಳ ಪ್ರಥಮ ವರ್ಷದ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಿದ್ದೇಶ್ವರ ಶ್ರೀಗಳು ತಮ್ಮಲ್ಲಿರುವ ಅಪಾರ ಜ್ಞಾನವನ್ನು ಜನರಿಗೆ ಉಣಬಡಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಯಾವದೇ ಲಾಪೇಕ್ಷೆ ಬಯಸದೆ, ದೇಶ, ವಿದೇಶಗಳಲ್ಲಿಯೂ ತಮ್ಮ ಪ್ರವಚನ ನೀಡಿದ್ದಾರೆ. ಶ್ರೀಗಳ ಹಾಕಿಕೊಟ್ಟ ದಾರಿಯಲ್ಲಿ ಸಾಗಿದಾಗ ಮಾತ್ರ ಜೀವನ ಪಾವನಗೊಳ್ಳಲಿದೆ ಎಂದರು.

ಸಹಕಾರಿ ಮುಖಂಡ ಸದಾಶಿವ ಬುಟಾಳೆ ಮಾತನಾಡಿ, ನಡೆದಾಡುವ ದೇವರೆಂದು ಪ್ರಸಿದ್ಧರಾದ ಸಿದ್ದೇಶ್ವರ ಶ್ರೀಗಳು ಸಮಯಕ್ಕೆ ಹೆಚ್ಚ ಮಹತ್ವ ನೀಡುತ್ತಿದ್ದರು. ಅವರ ಆಧ್ಯಾತ್ಮಿಕ ಸೇವೆಯಿಂದ ಅವರ ಹೆಸರು ಅಜರಾಮರವಾಗಿದೆ. ಹಣ, ಆಸ್ತಿ, ಮಠ, ವೈಭವಗಳಿಂದ ಇವರು ಬದುಕಿನುದ್ದಕ್ಕೂ ಜ್ಞಾನವನ್ನ ಹಂಚುತ್ತಾ ನಡೆದರು.

ಪುರಸಭೆ ಸದಸ್ಯ ರಾವಸಾಬ ಐಹೊಳೆ ಮತ್ತು ಸಮಾಜ ಸೇವಕ ಶಿವಾನಂದ ದಿವಾನಮಳ ಮಾತನಾಡಿ, ಶ್ರೀಗಳು ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರವಚನ ನೀಡುತ್ತಿದ್ದರು. ಸರಳ ಬದುಕು ನಡೆಸಿ ಸಂತರಾಗಿದ್ದಾರೆ. ಶ್ರೀಗಳ ಪ್ರವಚನದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.

ಪಟ್ಟಣದ ವಿವಿಧ ವೃತ್ತಗಳಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಚಿನ ಬುಟಾಳೆ, ಶಂಕರ ಹಳ್ಳದಮಳ, ಶ್ರೀಶೈಲ ಹಳ್ಳದಮಳ, ರವಿ ಬಕಾರಿ, ಮುರುಘೇಶ ಐಗಳಿ, ವಿರೂಪಾಕ್ಷಿ ಚುನಮುರಿ, ಸುನೀಲ ಮೇತ್ರಿ ಇತರರು ಇದ್ದರು.