ನ್ಯೂಸ್

Winter Session | ಸಂಸತ್​​ ಅಧಿವೇಶನ ಅವಧಿ ಕಡಿತ; ಸರ್ಕಾರ ಚರ್ಚೆಯಿಂದ ಓಡಿ ಓಡಿಹೋಗುತ್ತಿದೆಯೇ ಎಂಬ ಜೈರಾಮ್​ ರಮೇಶ್​ ಟೀಕೆಗೆ ಕಿರಣ್​ ರಿಜಿಜು ತಿರುಗೇಟು

ದೆಹಲಿ: ಡಿಸೆಂಬರ್​ 1 ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದ (Winter Session) ಅವಧಿಯ ಕುರಿತು ಸರ್ಕಾರದ ವಿರುದ್ಧದ ಕಾಂಗ್ರೆಸ್​ ನಾಯಕ ಜೈರಾಮ್ ರಮೇಶ್ ಟೀಕೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ.

ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಿಜಿಜು, ಸಂಸತ್ತಿನಲ್ಲಿ ಚರ್ಚೆಯಿಂದ ಸರ್ಕಾರ ಓಡಿಹೋಗುತ್ತಿದೆಯೇ ಎಂಬ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಿಡಿಯೋ ಕ್ಲಿಪ್‌ಗೆ ಪ್ರತಿಕ್ರಿಯಿಸಿದ್ದಾರೆ.

ಸಂಸತ್ತಿನ ಚರ್ಚೆಯಲ್ಲಿ ಭಾಗವಹಿಸಲು ಉತ್ಸುಕರಾಗಿರುವ ಇತರ ಸಂಸದರಿಗೆ ಅಡೆತಡೆಗಳನ್ನು ಸೃಷ್ಟಿಸದಂತೆ ಕಾಂಗ್ರೆಸ್ ಪಕ್ಷವನ್ನು ಪದೇ ಪದೇ ಮನವಿ ಮಾಡಿಕೊಳ್ಳುವುದರಲ್ಲಿ ನಾನು ಎಂದಿಗೂ ಸುಸ್ತಾಗುವುದಿಲ್ಲ. ಸಂಸತ್ತು ತನ್ನ ಕಾರ್ಯನಿರ್ವಹಿಸಲಿ ಎಂದು ಬರೆದುಕೊಂಡಿದ್ದಾರೆ.

ಜೈರಾಮ್​ ರಮೇಶ್​ ಆರೋಪವೇನು..?

ಸಂಸತ್ತಿನ ಚಳಿಗಾಲದ ಅಧಿವೇಶನದ ಅವಧಿಯ ಬಗ್ಗೆ ಸರ್ಕಾರದ ನಡೆಯನ್ನು ಟೀಕಸಿದ್ದ ಜೈರಾಮ್ ರಮೇಶ್, ಸರ್ಕಾರ ಅವಧಿಯನ್ನು ಮೊಟಕುಗೊಳಿಸುವ ಮೂಲಕ ಯಾವುದರಿಂದ ಓಡಿಹೋಗಲು ಪ್ರಯತ್ನಿಸುತ್ತಿದೆ ಎಂದು ಪ್ರಶ್ನಿಸಿದ್ದರು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ರಮೇಶ್, ಚಳಿಗಾಲದ ಅಧಿವೇಶನವನ್ನು ಸಾಮಾನ್ಯವಾಗಿ ನವೆಂಬರ್ 20 ರಿಂದ 23 ರವರೆಗೆ ಕರೆಯಲಾಗುತ್ತಿತ್ತು, ಡಿಸೆಂಬರ್ 24 ರವರೆಗೆ ಮುಂದುವರಿಯುತ್ತಿತ್ತು ಎಂದು ಹೇಳಿದರು.

ದೆಹಲಿಯ ಮಾಲಿನ್ಯದಿಂದಾಗಿ ಅಧಿವೇಶನವನ್ನು ಮೊಟಕುಗೊಳಿಸಲಾಗುತ್ತಿದೆಯೇ? ಯಾವುದೇ ಶಾಸನ ಅಥವಾ ಮಸೂದೆ ಇಲ್ಲವೇ? ಚರ್ಚೆಗೆ ಯಾವುದೇ ವಿಷಯವಿಲ್ಲವೇ?. ಸಂಸತ್ತನ್ನು ಔಪಚಾರಿಕವಾಗಿ ಕೊನೆಗೊಳಿಸಲು ಬಯಸುತ್ತಿದ್ದಾರೆ, ನಾವು ಇದನ್ನು ಮೊದಲ ಬಾರಿ ನೋಡುತ್ತಿದ್ದೇವೆ, ಈ ಹಿಂದೆ, ಚುನಾವಣೆಗು ಮುನ್ನ ಅಧಿವೇಶನಗಳನ್ನು ಮೊಟಕುಗೊಳಿಸಲಾಗುತ್ತಿತ್ತು, ಇದು ಲೋಕಸಭಾ ಚುನಾವಣೆಗಳು ಬರುತ್ತವೆ ಎನ್ನುವ ಮುನ್ಸೂಚನೆಯೇ ? ಎಂದು ಪ್ರಶ್ನಿಸಿದರು.

SIR ಸಮಸ್ಯೆ, ಟ್ರಂಪ್​ರ ಕದನ ವಿರಾಮ ಹೇಳಿಕೆಗಳ ಬಗ್ಗೆ ಪ್ರಧಾನಿಗಳ ಮೌನವು ಸದ್ಯ ಪ್ರಮುಖ ಸಮಸ್ಯೆಯಾಗಿದೆ. ಚೀನಾದೊಂದಿಗಿನ ಸಂಬಂಧದ ನಿಲುವು ಬಗೆಹರಿದಿಲ್ಲ, ಚೀನಾದೊಂದಿಗೆ ಗಡಿ ಒಪ್ಪಂದವಾಗಿಲ್ಲ. ಆರ್ಥಿಕ ಬೆಳವಣಿಗೆಯ ದರ, GDP, ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. ಸಮಸ್ಯೆಗಳಿಗೆ ದೇಶದಲ್ಲಿ ಕೊರತೆ ಇಲ್ಲ, ನಾವು ಮತ್ತೆ ಮತ್ತೆ ನೋಟಿಸ್‌ಗಳನ್ನು ನೀಡುತ್ತಲೇ ಇರುತ್ತೇವೆ, ಆದರೆ ಇವರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದರು. ಬಿಹಾರದಲ್ಲಿ ಜನರು ಬದಲಾವಣೆಗಾಗಿ ಮತ ಚಲಾಯಿಸಿದ್ದಾರೆ. ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿನ ಹೆಚ್ಚಿನ ಮತದಾನವು ಸಾರ್ವಜನಿಕರು ಬಯಸಿರುವ ಬದಲಾವಣೆಯನ್ನು ಸೂಚಿಸುತ್ತದೆ, ಸಿಎಂ ನಿತೀಶ್ ಕುಮಾರ್ ಮತ್ತು ಎನ್‌ಡಿಎ ಸಮಯ ಮುಕ್ತಾಯವಾಗಿದ್ದು, ಮಹಾಘಟಬಂಧನ್ ಸರ್ಕಾರ ರಚಿಸಲಿದೆ ಎಂದು ಹೇಳಿದರು.

ಡಿಸೆಂಬರ್ 1 ರಿಂದ ಡಿಸೆಂಬರ್ 19 ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಕರೆಯುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮತ್ತು ಜನರ ಆಕಾಂಕ್ಷೆಗಳನ್ನು ಪೂರೈಸುವ ರಚನಾತ್ಮಕ ಮತ್ತು ಅರ್ಥಪೂರ್ಣ ಅಧಿವೇಶನವನ್ನು ಸರ್ಕಾರ ಎದುರು ನೋಡುತ್ತಿದೆ ಎಂದು ರಿಜಿಜು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 1, 2025 ರಿಂದ ಡಿಸೆಂಬರ್ 19, 2025 ರವರೆಗೆ (ಸಂಸದೀಯ ವ್ಯವಹಾರಗಳ ಅಗತ್ಯಕ್ಕೆ ಒಳಪಟ್ಟು) ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಕರೆಯುವ ಸರ್ಕಾರದ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮತ್ತು ಜನರ ಆಕಾಂಕ್ಷೆಗಳನ್ನು ಪೂರೈಸುವ ರಚನಾತ್ಮಕ ಮತ್ತು ಅರ್ಥಪೂರ್ಣ ಅಧಿವೇಶನವನ್ನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.

ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 1 ರಂದು ಪ್ರಾರಂಭವಾಗಿ ಡಿಸೆಂಬರ್ 19 ರಂದು ಮುಕ್ತಾಯಗೊಳ್ಳಲಿದೆ.(ಏಜೆನ್ಸೀಸ್​)