ನ್ಯೂಸ್

ಪ್ರಧಾನಿ ಮೋದಿ ಪದವಿ ಶಿಕ್ಷಣದ ಕುರಿತು ಅವಹೇಳನ; ಕೇಜ್ರಿವಾಲ್​ ಸಲ್ಲಿಸಿದ್ದ ಅರ್ಜಿ ನಿರಾಕರಿಸಿದ ಸುಪ್ರೀಂ ಕೋರ್ಟ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಶಿಕ್ಷಣದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಗುಜರಾತ್​ ವಿಶ್ವವಿದ್ಯಾಲಯವು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ವಿರುದ್ದ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ.

ವಿಚಾರಣೆಗೆ ತಡೆ ನೀಡುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ್ರು. ಅರ್ಜಿ ವಿಚಾರಣೆ ನಡೆಸಿ ಸಂಜೀವ್​ ಖನ್ನಾ ಅವರಿದ್ದ ಏಕಸದಸ್ಯ ಪೀಠವು ಪ್ರಕರಣದ ವಿಚಾರಣೆಯೂ ಗುಜರಾತ್​ ಹೈಕೋರ್ಟಿನಲ್ಲಿ ಬಾಕಿ ಇರುವ ಕಾರಣ ತಡೆ ನೀಡಲು ಸಾಧ್ಯವಿಲ್ಲ. ಆಗಸ್ಟ್​ 29ರಂದು ಗುಜರಾತ್​ ಹೈಕೋರ್ಟ್​ ವಿಚಾರಣೆ ನಡೆಸಲಿದ್ದು, ಆ ನಂತರ ತೀರ್ಮಾನಿಸಲಾಗುವುದು ಎಂದು ಹೇಳುತ್ತ ಅರ್ಜಿಯನ್ನು ನಿರಾಕರಿಸಿದೆ.

ಪ್ರಕರಣದ ಹಿನ್ನಲೆ

ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ ಅರವಿಂದ್​ ಕೇಜ್ರಿವಾಲ್​ ಹಾಗೂ ಸಂಜಯ್​ ಸಿಂಗ್​ ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಗುಜರಾತ್​ ವಿಶ್ವವಿದ್ಯಾಲಯವು ನಿಜವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪದವಿ ನೀಡಿದ್ದರೆ ಮಾಹಿತಿ ಹಕ್ಕು ಕಾಯ್ದೆಯಡಿ ಯಾಕೆ ಉತ್ತರವನ್ನು ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದರು.

ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಶಿಕ್ಷಣ ನಕಲಿ ವಿಶ್ವವಿದ್ಯಾಲಯ ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಯಾವುದಾದರು ವಿಶ್ವವಿದ್ಯಾಲಯಗಳಲ್ಲಿ ಪ್ರಧಾನಿ ವ್ಯಾಸಂಗ ಮಾಡಿದ್ದಲ್ಲಿ, ನಮ್ಮಲ್ಲಿ ವ್ಯಾಸಂಗ ಮಾಡಿದವರು ಇಂದು ದೇಶದ ಪ್ರಧಾನಿಯಾಗಿದ್ದಾರೆ ಎಂದು ಹೇಳಿಕೊಂಡು ಸಂಭ್ರಮಿಸುತ್ತಿದ್ದರು ಎಂದು ವ್ಯಂಗ್ಯಭರಿತವಾಗಿ ಮಾತನಾಡಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹಾಗೂ ಅವರ ಪಕ್ಷದ ನಾಯಕ ಸಂಜಯ್​ ಸಿಂಗ್​ ಅವರ ಹೇಳಿಕೆಗಳು ಗುಜರಾತ್​ ವಿಶ್ವವಿದ್ಯಾಲಯದ ಹೆಸರನ್ನು ಕೆಡಿಸುತ್ತಿದ್ದು, ಮಾನನಷ್ಟಕ್ಕೂ ಕಾರಣವಾಗಿದೆ ಎಂದು ಆರೋಪಿಸಿ ವಿವಿಯ ರಿಜಿಸ್ಟಾರ್​ ಪಿಯೂಷ್​ ಪಟೇಲ್​ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.