ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಭರ್ಜರಿ ಜಯಭೇರಿ ಬಾರಿಸಿರುವ ಆಮ್ ಆದ್ಮಿ ಪಕ್ಷವು ರಾಜಕೀಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಸತತ ಮೂರನೇ ಅವಧಿಗೆ ದೆಹಲಿ ಸಿಎಂ ಗಾದಿಗೆ ಏರಲು ಸಜ್ಜಾಗಿರುವ ಅರವಿಂದ್ ಕೇಜ್ರಿವಾಲ್ ಅವರು ಫೆ. 16ರ ಭಾನುವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಅದ್ಧೂರಿ ಸಮಾರಂಭಕ್ಕೆ ವಿವಿಧ ನಾಯಕರುಗಳನ್ನು ಕೇಜ್ರಿವಾಲ್ ಆಹ್ವಾನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರನ್ನು ಭೇಟಿಯಾಗಿದ್ದಾರೆ. ಗವರ್ನರ್ ನಿವಾಸದಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೀಕೆಂಡ್ನಲ್ಲಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಪ್ ಶಾಸಕರೊಂದಿಗೂ ಕೇಜ್ರಿವಾಲ್ ಇಂದು ಸಭೆ ನಡೆಸಲಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಶಾಸಕರು ಆಪ್ ಶಾಸಕಾಂಗ ಪಕ್ಷದ ನಾಯಕನಾಗಿ ಕೇಜ್ರಿವಾಲ್ ಅವರನ್ನು ಇಂದು ಆಯ್ಕೆ ಮಾಡಲಿದ್ದಾರೆ.
ಪ್ರಮಾಣ ವಚನಕ್ಕೂ ಮುನ್ನ ಕೇಜ್ರಿವಾಲ್ ಅವರು ನಿಗದಿತ ಪ್ರಕ್ರಿಯೆಯಂತೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಮೂರನೇ ಅವಧಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಲಿದ್ದಾರೆ.
ಅಂದಹಾಗೆ ಫೆ. 8ರಂದು ದೆಹಲಿಯ 70 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಮಂಗಳವಾರ(ಫೆ.11) ಪ್ರಕಟವಾದ ಫಲಿತಾಂಶದಲ್ಲಿ ಆಪ್ 62 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಮೂರನೇ ಅವಧಿಗೆ ದೆಹಲಿ ಗದ್ದುಗೆ ಏರಿದೆ. ಬಿಜೆಪಿ 8 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದ್ದು, ಕಾಂಗ್ರೆಸ್ ಖಾತೆ ತೆರೆಯದೇ ಹೀನಾಯವಾಗಿ ಸೋತಿದೆ. (ಏಜೆನ್ಸೀಸ್)