ನ್ಯೂಸ್

ಸ್ನೇಹಿತನ ಮಗಳ ಮೇಲೆ ನಿರಂತರ ಅತ್ಯಾಚಾರ ಆರೋಪ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕನನ್ನು ವಜಾಗೊಳಿಸಿ ಕೇಜ್ರಿವಾಲ್ ಆದೇಶ

ನವದೆಹಲಿ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನಿರ್ದೇಶಕರನ್ನು ಅಮಾನತು ಮಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ದೆಹಲಿ ಪೊಲೀಸರು ಉಪನಿರ್ದೇಶಕರ ಮನೆಗೆ ಬಂದಿದ್ದು, ಉಪನಿರ್ದೇಶಕರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಯಿದೆ. ಉಪ ನಿರ್ದೇಶಕರ ಮೇಲೆ ತಮ್ಮ ಸ್ನೇಹಿತನ ಮಗಳ ಮೇಲೆ ಹಲವು ತಿಂಗಳುಗಳಿಂದ ಅತ್ಯಾಚಾರವೆಸಗಿರುವ ಆರೋಪವಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತನ ಮಗಳ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಧರಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದರು.

ಘಟನೆಯ ವಿವರ

ಸಂತ್ರಸ್ತ ಬಾಲಕಿ ತನ್ನ ತಂದೆಯ ಮರಣದ ನಂತರ ಅಕ್ಟೋಬರ್ 1, 2020 ರಿಂದ ಉಪ ನಿರ್ದೇಶಕರ ಮನೆಯಲ್ಲಿ ವಾಸಿಸುತ್ತಿದ್ದಳು. ಪೊಲೀಸರ ಪ್ರಕಾರ, ಆರೋಪಿ ಅಧಿಕಾರಿಯು ನವೆಂಬರ್ 2020 ಮತ್ತು ಜನವರಿ 2021 ರ ನಡುವೆ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾರೆ. ದೂರಿನಲ್ಲಿ ಅಧಿಕಾರಿಯ ಪತ್ನಿಯೂ ಗರ್ಭಪಾತಕ್ಕೆ ಔಷಧ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

12ನೇ ತರಗತಿ ವಿದ್ಯಾರ್ಥಿನಿ

ಸಂತ್ರಸ್ತೆ ಸಿವಿಲ್ ಲೈನ್ಸ್ ಪ್ರದೇಶದ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ, ದೆಹಲಿಯ ಬುರಾರಿ ಪ್ರದೇಶದ ಚರ್ಚ್‌ಗೆ ಭೇಟಿ ನೀಡಿದಾಗ ಸಂತ್ರಸ್ತೆಯ ಕುಟುಂಬಕ್ಕೆ ಉಪ ನಿರ್ದೇಶಕರ ಪರಿಚಯವಾಯಿತು. 2020 ರಲ್ಲಿ, ವಿದ್ಯಾರ್ಥಿನಿಯ ತಂದೆ ನಿಧನರಾದರು. ನಂತರ ಸಂತ್ರಸ್ತೆ ತುಂಬಾ ಅಸಮಾಧಾನಗೊಂಡಾಗ ಉಪ ನಿರ್ದೇಶಕರು ಸಂತ್ರಸ್ತೆಯನ್ನು ತಮ್ಮ ಮನೆಗೆ ಕರೆತಂದರು. ಆರೋಪಿ ಉಪ ನಿರ್ದೇಶಕರು ಹಲವಾರು ಬಾರಿ ಅತ್ಯಾಚಾರ ಎಸಗಿದ್ದಲ್ಲದೆ, ಸಂತ್ರಸ್ತೆ ಗರ್ಭಿಣಿಯಾದಾಗ ಉಪನಿರ್ದೇಶಕರ ಪತ್ನಿಗೆ ಈ ವಿಷಯ ತಿಳಿಸಿದ್ದು, ಆಗ ಪತ್ನಿ, ವಿಷಯ ಎಲ್ಲೂ ಹೋಗದಂತೆ ಸಲಹೆ ನೀಡಿ ಮಗನ ಬಳಿ ಔಷಧ ಕೇಳಿ ಗರ್ಭಪಾತ ಮಾಡಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

ಸಂತ್ರಸ್ತೆ ಜನವರಿ 2021 ರಲ್ಲಿ ತನ್ನ ತಾಯಿ ಬಳಿ ಹೋದಳು. ಆಕೆಯ ಚಲನವಲನ ಗಮನಿಸಿದ ತಾಯಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ನಡೆದ ಸಮಾಲೋಚನ ವೇಳೆ ಸಂತ್ರಸ್ತ ಬಾಲಕಿ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾಳೆ. ಬಳಿಕ ಆಸ್ಪತ್ರೆಯಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸ್‌) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 376(2), 506, 509, 323, 313, 120ಬಿ, 34ಐಪಿಸಿ ಮತ್ತು ಪೋಕ್ಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯನ್ನು ಸದ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಚಿಕಿತ್ಸೆ ನಡೆಯುತ್ತಿದೆ. ಮ್ಯಾಜಿಸ್ಟ್ರೇಟ್ ಮುಂದೆ ಅವರ ಹೇಳಿಕೆಯನ್ನು ಇನ್ನೂ ದಾಖಲಿಸಲಾಗಿಲ್ಲ. ಈ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.