ನ್ಯೂಸ್

ನಾನು ಇಂಡಿಯಾ ಮೈತ್ರಿಕೂಟದೊಂದಿಗೆ ಇದ್ದೇನೆ ಆದರೆ… ಪಂಜಾಬ್‌ನಲ್ಲಿ ಕಾಂಗ್ರೆಸ್ ನಾಯಕನ ಬಂಧನದ ಬಗ್ಗೆ ಮಾತನಾಡಿದ ಕೇಜ್ರಿವಾಲ್

ನವದೆಹಲಿ: ಶುಕ್ರವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಪಂಜಾಬ್‌ನಲ್ಲಿ ಕಾಂಗ್ರೆಸ್ ನಾಯಕನ ಬಂಧನ ಮತ್ತು ಇಂಡಿಯಾ ಮೈತ್ರಿಕೂಟದಿಂದ ಬೇರ್ಪಡುವ ಬಗ್ಗೆ ಪತ್ರಕರ್ತರಿಗೆ ಕೇಳಿದಾಗ, ನಾನು ಸಂಪೂರ್ಣವಾಗಿ ಇಂಡಿಯಾ ಒಕ್ಕೂಟದೊಂದಿಗೆ ಇದ್ದೇನೆ ಎಂದು ಕೇಜ್ರಿವಾಲ್ ಹೇಳಿದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮೈತ್ರಿಗೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ. ಯಾವುದೇ ಸಂದರ್ಭದಲ್ಲೂ ಇದರಿಂದ ವಿಮುಖರಾಗುವುದಿಲ್ಲ. ನಿನ್ನೆ ಪಂಜಾಬ್ ಪೊಲೀಸರು ಕಾಂಗ್ರೆಸ್ ಮುಖಂಡರನ್ನು ಬಂಧಿಸಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಅದರ ವಿವರಗಳು ನನ್ನ ಬಳಿ ಇಲ್ಲ. ಆದರೆ ನಾವು ಡ್ರಗ್ಸ್ ವಿರುದ್ಧ ಸಮರ ಆರಂಭಿಸಿದ್ದೇವೆ. ನಾನು ಯಾವುದೇ ನಿರ್ದಿಷ್ಟ ಪ್ರಕರಣ ಅಥವಾ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ಮಾದಕ ವ್ಯಸನವನ್ನು ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ. ಡ್ರಗ್ಸ್ ವಿರುದ್ಧದ ಈ ಹೋರಾಟದಲ್ಲಿ ಅವರು ಎಷ್ಟೇ ದೊಡ್ಡವರಾದರೂ ಯಾರೂ ಉಳಿಯುವುದಿಲ್ಲ ಎಂದರು.

2015ರ ಪ್ರಕರಣದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಗುರುವಾರ ಬೆಳಗ್ಗೆ ಕಾಂಗ್ರೆಸ್ ಮುಖಂಡ ಸುಖಪಾಲ್ ಸಿಂಗ್ ಖೈರಾ ಅವರನ್ನು ಚಂಡೀಗಢದ ನಿವಾಸದಿಂದ ಪಂಜಾಬ್ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಪಂಜಾಬ್ ಕಾಂಗ್ರೆಸ್ ರಾಜ್ಯದ ಭಗವಂತ್ ಮಾನ್ ಸರ್ಕಾರವನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಸೇಡಿನ ರಾಜಕೀಯ ಎಂದು ಕರೆಯುತ್ತಿದೆ.

ಈ ವಿಚಾರದಲ್ಲಿ ನಾನು ಭಗವಂತ್ ಮಾನ್ ಸರ್ಕಾರವನ್ನು ಖಂಡಿಸುತ್ತೇನೆ ಎಂದು ಪಂಜಾಬ್ ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಕೂಡ ಹೇಳಿದ್ದಾರೆ.