ನ್ಯೂಸ್

ದೆಹಲಿಗೆ ಸೇನೆಯನ್ನು ಕರೆಸಿ ಪರಿಸ್ಥಿತಿ ನಿಯಂತ್ರಿಸಿ: ಅಮಿತ್​ ಷಾಗೆ ಅರವಿಂದ್​ ಕೇಜ್ರಿವಾಲ್​ ಮನವಿ

ನವದೆಹಲಿ: ಸಿಎಎ ಮತ್ತು ಎನ್​ಆರ್​ಸಿ ವಿರೋಧದ ಹೋರಾಟದಿಂದಾಗಿ ಯುದ್ಧ ಭೂಮಿಯಂತಾಗಿರುವ ದೆಹಲಿಗೆ ಸೇನೆಯನ್ನು ಕರೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಕೇಂದ್ರ ಗೃಹ ಸಚಿವ ಅಮಿತ್​ ಷಾರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸತತ ಮೂರು ದಿನಗಳಿಂದ ದೆಹಲಿಯಲ್ಲಿ ಹೋರಾಟವು ಹಿಂಸಾತ್ಮಕ ಹಾದಿಯಲ್ಲಿ ಸಾಗುತ್ತಿದ್ದು ಒಬ್ಬ ಪೊಲೀಸ್​ ಪೇದೆ ಸೇರಿದಂತೆ ಒಟ್ಟು 20 ಮಂದಿ ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದಾರೆ. ಹಾಗಾಗಿ ಗಲಭೆ ನಡೆಯುತ್ತಿರುವ ಪ್ರದೇಶಕ್ಕೆ ಸೇನೆಯನ್ನು ಕರೆತರಬೇಕು. ಆ ಮೂಲಕ ಜನರಲ್ಲಿ ಧೈರ್ಯ ತುಂಬಬೇಕು ಮತ್ತು ಇತರೆ ಪ್ರದೇಶಗಳಲ್ಲಿ ಕರ್ಫ್ಯೂ ಹಾಕಬೇಕು ಎಂದು ಕೇಜ್ರಿವಾಲ್​ ಟ್ವೀಟ್​ ಮೂಲಕ ಕೇಳಿಕೊಂಡಿದ್ದಾರೆ.

ಈ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೆ ಪತ್ರವನ್ನು ಬರೆಯುವುದಾಗಿಯೂ ಸಹ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಪರಿಸ್ಥಿತಿ ತೀರಾ ಗಂಭೀರವಾದಾಗ ರಾಜ್ಯ ಪೊಲೀಸ್​ ಇಲಾಖೆಗೆ ಸೇನೆಯ ಸಹಾಯ ಅಗತ್ಯ ಎನಿಸಿದಾಗ ಮಾತ್ರ ಸೇನೆಯನ್ನು ಕರೆಸಿಕೊಳ್ಳಬಹುದಾಗಿದೆ. ದೆಹಲಿಯು ಕೇಂದ್ರಾಡಳಿತ ಪ್ರದೇಶವಾದ್ದರಿಂದ ಪೊಲೀಸ್​ ಇಲಾಖೆಯು ಕೇಂದ್ರದ ನಿರ್ವಹಣೆಯಲ್ಲಿದ್ದು ಸೇನೆಯನ್ನು ಕರೆಸಿಕೊಳ್ಳುವುದು ಕೇಂದ್ರದ ಕೈನಲ್ಲಿರುತ್ತದೆ. (ಏಜೆನ್ಸೀಸ್​)