ನ್ಯೂಸ್

ಅಬಕಾರಿ ನೀತಿ ಹಗರಣದ ಸೂತ್ರಧಾರಿ ಸಿಎಂ ಕೇಜ್ರಿವಾಲ್​; ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ

ನವದೆಹಲಿ: ಮದ್ಯದ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಆರೋಪಿಗಳ ವಿರುದ್ಧ ಸಿಬಿಐ ಸೋಮವಾರ (ಜುಲೈ 29) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಚಾರ್ಜ್ ಶೀಟ್‌ನಲ್ಲಿ ಕೇಜ್ರಿವಾಲ್ ಅವರನ್ನು ಮದ್ಯ ಹಗರಣದ ಸೂತ್ರಧಾರಿ​ ಎಂದು ಹೇಳಿದೆ. ಮತ್ತು ಆಮ್ ಆದ್ಮಿ ಪಕ್ಷ 100 ಕೋಟಿ ರೂಪಾಯಿ ಲಂಚ ಪಡೆದಿದೆ ಎಂದು ಆರೋಪಿಸಿದೆ. ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.

ಅಬಕಾರಿ ನೀತಿ ಹಗರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರ ಬಿಂದುವಾಗಿದ್ದು, ಅವರೇ ಅದರ ಮಾಸ್ಟರ್ ಮೈಂಡ್ ಎಂದು ತನಿಖಾ ಸಂಸ್ಥೆ ಹೇಳಿದೆ. ಕ್ಯಾಬಿನೆಟ್ ಮುಖ್ಯಸ್ಥರಾಗಿರುವ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿಗೆ ಸಹಿ ಹಾಕಿ ಅದನ್ನು ತಮ್ಮ ಸಹಚರರಿಗೆ ನೀಡಿದ್ದಾರೆ. ಇದು ಕರೊನಾ-19 ಸಾಂಕ್ರಾಮಿಕ ಸಮಯದಲ್ಲಿ ನಡೆದಿದೆ. ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ತನಿಖಾ ಸಂಸ್ಥೆಗೆ ಸಾಕ್ಷ್ಯ ಸಿಕ್ಕಿದೆ ಎಂದು ಸಿಬಿಐ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದೇ ಸಮಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರವೂ ಸಿಎಂ ನೇರವಾಗಿ ಅಥವಾ ಪರೋಕ್ಷವಾಗಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದರು.

ಪೊಲೀಸ್ ರಿಮಾಂಡ್‌ನಲ್ಲಿರುವಾಗ ಹೊರತುಪಡಿಸಿ, ಬಂಧನದ ನಂತರ ತನಿಖಾ ಸಂಸ್ಥೆ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರನ್ನು ವಿಚಾರಣೆ ನಡೆಸಿಲ್ಲ. ಕೇಜ್ರಿವಾಲ್ ವಿರುದ್ಧ ಏಜೆನ್ಸಿ ಬಳಿ ಯಾವುದೇ ನೇರ ಸಾಕ್ಷ್ಯಗಳಿಲ್ಲ ಮತ್ತು ಅವರ ಮನೆಯಿಂದ ಏನನ್ನೂ ವಶಪಡಿಸಿಕೊಂಡಿಲ್ಲ. ಅಬಕಾರಿ ನೀತಿಯ ರಚನೆ ಅಥವಾ ಅನುಷ್ಠಾನದಲ್ಲಿ ಕೇಜ್ರಿವಾಲ್ ಮಾತ್ರ ಭಾಗಿಯಾಗಿಲ್ಲ. ಆದರೆ ಇದು ಎಲ್‌ಜಿ ಮತ್ತು ಒಂಬತ್ತು ಸಚಿವಾಲಯಗಳು ಸೇರಿದಂತೆ ಕನಿಷ್ಠ 50 ಅಧಿಕಾರಿಗಳನ್ನು ಒಳಗೊಂಡ ಸಾಂಸ್ಥಿಕ ನಿರ್ಧಾರವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೂ ಮುನ್ನ ಜುಲೈ 12ರಂದು ಇಡಿ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಸಿಎಂ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ, ಸಿಬಿಐ ಬಂಧಿಸಿದ್ದರಿಂದ ಜೈಲಿನಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಆರೋಪಿ ಹೆಸರಿಸಲಾಗಿದೆ. ಇತ್ತೀಚೆಗಷ್ಟೇ ದೆಹಲಿ ನ್ಯಾಯಾಲಯವು ಮದ್ಯದ ಹಗರಣದಲ್ಲಿ ಸಿಎಂ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಆಗಸ್ಟ್ 8 ರವರೆಗೆ ವಿಸ್ತರಿಸಿತ್ತು.(ಏಜೆನ್ಸೀಸ್​​)