ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಬಿಆರ್ಎಸ್ ನಾಯಕಿ ಕೆ.ಕವಿತಾ ಅವರು ಸದ್ಯಕ್ಕೆ ಜೈಲಿನಿಂದ ಹೊರಬರುವಂತೆ ಕಾಣಿಸುತ್ತಿಲ್ಲ. ದಿಲ್ಲಿಯ ರೂಸ್ ಅವೆನ್ಯೂ ನ್ಯಾಯಾಲಯ ಅವರಿಗೆ ಮೇ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಮೂಲಕ ಅವರ ಜೈಲು ವಾಸ ಮುಂದುವರಿದಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಗೋವಾ ಚುನಾವಣೆಯ ನಿಧಿ ವ್ಯವಸ್ಥಾಪಕ ಚನ್‌ಪ್ರೀತ್ ಸಿಂಗ್ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯವು ಮೇ 7 ರವರೆಗೆ ವಿಸ್ತರಿಸಿದೆ. ನ್ಯಾಯಾಲಯವು ಅರವಿಂದ್ ಕೇಜ್ರಿವಾಲ್ ಅವರನ್ನು ಏ.1 ರಿಂದ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಇದಾದ ಬಳಿಕ ನ್ಯಾಯಾಲಯ ಮತ್ತೊಮ್ಮೆ ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್ 23ರವರೆಗೆ ವಿಸ್ತರಿಸಿತ್ತು.
ಈ ಪ್ರಕರಣದಲ್ಲಿ ದೆಹಲಿ ಸಿಎಂ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಇದೀಗ ಮೇ 7ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಹಾಗೆಯೇ ತೆಲಂಗಾಣ ಮಾಜಿ ಸಿಎಂ, ಬಿಆರ್ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನೂ ಕೂಡ ವಿಸ್ತರಿಸಲಾಗಿದೆ.
ಈ ಮೂವರೂ ಆರೋಪಿಗಳನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ತಮ್ಮ ವೈದ್ಯರೊಂದಿಗೆ ಪ್ರತಿದಿನ 15 ನಿಮಿಷಗಳ ವೈದ್ಯಕೀಯ ಸಮಾಲೋಚನೆಗೆ ಅವಕಾಶ ನೀಡುವಂತೆ ಕೋರಿ ಆಮ್ ಆದ್ಮಿ ಪಕ್ಷದ ಸಂಚಾಲಕನ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.