"ನಮ್ ಏರಿಯಾಲ್ ಒಂದಿನ', "ತುಘ್ಲಕ್', "ಹುಲಿರಾಯ', "ಅರ್ಧಂಬರ್ಧ ಪ್ರೇಮಕಥೆ'ಯ ನಿರ್ದೇಶಕ ಅರವಿಂದ್ ಕೌಶಿಕ್ ಇದೀಗ "ಕಂಟ್ರಿ ಮೇಡ್ ಭಾಗ 2' ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಇದುವರೆಗೂ ಬೇರೆ ಬೇರೆ ಜಾನರ್ಗಳ ಸಿನಿಮಾ ಮಾಡಿದ್ದ ಅವರು, ಇದೇ ಮೊದಲ ಬಾರಿಗೆ ಗ್ಯಾಂಗ್ಸ್ಟರ್ ಕಥೆಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದ್ದು, ಸದ್ಯ ಚಿತ್ರ ಪೋಸ್ಟ್ - ಪ್ರೊಡಕ್ಷನ್ ಹಂತದಲ್ಲಿದೆ. ಅದರ ನಡುವೆಯೇ ಇತ್ತೀಚೆಗಷ್ಟೆ ಚಿತ್ರದಲ್ಲಿರುವ ಪಾತ್ರಗಳನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿದ್ದಾರೆ. ಕಾಜಲ್, ಮಿಲ್ಕಿ, ಮಜ್ಜಿಗೆ, ಜೋಕರ್ ಜಾನಿ, ಪಾಮು, ಪಾಯ್ಸನ್ ರವಿ, ಬ್ಯಾಂಕಾಕ್ ಬುಜ್ಜಿ, ಬಾಂಬೆ ಬಂಟಿ, ಮೆಡಿಕಲ್ ವಾಸು, ರಿಯಲ್ ಎಸ್ಟೇಟ್ ರುದ್ರಿ, ಆ್ಯಂಕರ್ ಅಂಜಲಿ, ಕ್ಯಾಟರಿಂಗ್ ಗಿರಿ, ಡಿಚ್ಚಿ ದಿನೇಶ, ಡೇರ್ಡೆವಿಲ್ ಸರೋಜಾ, ಜಿಮ್ ಚೇತು, ಲಾಂಗ್ ಲಕ್ಷ$್ಮಣ... ಹೀಗೆ ಚಿತ್ರ&ವಿಚಿತ್ರ ಪಾತ್ರಗಳನ್ನು ಟೀಸರ್ ಮೂಲಕ ಪರಿಚಯ ಮಾಡಿಕೊಡಲಾಗಿದೆ. ಚಿತ್ರದ ಬಗ್ಗೆ ಅರವಿಂದ್ ಕೌಶಿಕ್, "ನಮ್ಮೂರಲ್ಲಿ ನೊಣಗಳು ಜಾಸ್ತಿ, ಏಕೆಂದರೆ ನಮ್ಮೂರಲ್ಲಿ ಹೆಣಗಳು ಜಾಸ್ತಿ ಎಂಬ ಎಳೆಯನ್ನಿಟ್ಟುಕೊಂಡು ಈ ಚಿತ್ರದ ಕಥೆ ಬರೆದೆ. ದ್ವೇಷ, ರೋಷ, ಸಿಟ್ಟು, ಸೇಡಿನ ಯುದ್ಧಗಳನ್ನು ಹೆಚ್ಚಾಗಿ ಗಂಡಸರು ಮಾಡಿದರೂ, ಗಾಯಗಳಾಗುವುದು ಮನೆಯಲ್ಲಿರುವ ಹೆಂಗಸರಿಗೆ. ಹೊಸಿಲು ದಾಟಿ ಗಂಡಸ್ತನ ಮೆರೆದು ಚಾಕು ಇರಿಯುವ ಗಂಡಸರಿಗೆ, ಮನೆಯಲ್ಲಿನ ಹೆಂಗಸರ ನೆನಪು ಬರುವುದಿಲ್ಲ. ಈ ಅಂಶವನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ಚಿತ್ರದಲ್ಲಿ ನಾಯಕ, ನಾಯಕಿ, ಕಾಮಿಡಿಯನ್ ಅಂತ ಯಾರೂ ಇಲ್ಲ. ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆಯಿದೆ' ಎಂದು ಮಾಹಿತಿ ನೀಡಿದರು. ಚಿತ್ರದಲ್ಲಿ ಅರವಿಂದ್ ಕೌಶಿಕ್, ಅಭಿಲಾಷ್ ದ್ವಾರಕೀಶ್, ರಾವ್ ರಾಮ್, ಶಿಲ್ಪಾ ಅರವಿಂದ್, ಪ್ರದಿಪ್, ಗೌರವ್, ಕುಲದೀಪ್, ಅಶ್ವಿತಾ, ಸುಜಿತ್ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಅರ್ಜುನ್ ರಾಮು ಸಂಗೀತ, ಸೂರ್ಯ ಛಾಯಾಗ್ರಹಣ ಹಾಗೂ ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನದಲ್ಲಿ "ಕಂಟ್ರಿ ಮೇಡ್ 2' ಮೂಡಿಬಂದಿದೆ.
ಪಾವಗಡದ ನೈಜ ವ್ಯಕ್ತಿಗಳನ್ನಾಧರಿಸಿದ ಕಥೆ
ಅಂದಹಾಗೆ, ನಿರ್ದೇಶಕ ಅರವಿಂದ್ ಕೌಶಿಕ್ಗೆ ತುಮಕೂರಿನ ಪಾವಗಡದ ಬಗ್ಗೆ ಮೊದಲಿನಿಂದಲೂ ಒಂದು ರೀತಿಯ ಕುತೂಹಲವಿತ್ತಂತೆ. "2023ರಲ್ಲಿ "ಅರ್ಧಂರ್ಬಧ ಪ್ರೇಮಕಥೆ' ಬಿಡುಗಡೆಯ ಬಳಿಕ ಒಮ್ಮೆ ಪಾವಗಡಕ್ಕೆ ಹೋಗಿದ್ದೆ. ಬಾಲ್ಯದಿಂದಲೂ ನನಗೆ ಬಹಳ ಕಾಡಿದಂತಹ ಊರದು. ಅಲ್ಲೇನಾದರೂ ಶೂಟಿಂಗ್ ಮಾಡಬೇಕು ಎಂಬ ಆಸೆಯಿತ್ತು. ಆ ಊರಿನಲ್ಲಿ ನಾನು ನೋಡಿದ ಕೆಲ ನಿಜ ಜೀವನದ ವ್ಯಕ್ತಿಗಳನ್ನು ಆಧರಿಸಿ ಪಾತ್ರಗಳನ್ನು ಸೃಷ್ಟಿಸಿದೆ. ಆ ಪಾತ್ರಗಳಿಂದ ಹುಟ್ಟಿದ ಕಥೆಯೇ "ಕಂಟ್ರಿ ಮೇಡ್ ಭಾಗ 2' ಎಂದು ಕಥೆ ಹುಟ್ಟಿದ ಕಥೆ ಹೇಳಿಕೊಳ್ಳುತ್ತಾರೆ.