ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ |
ಹೊಟ್ಟೆ ತುಂಬಿದ ತೋಳ ಮಲಗೀತು ನೀನ್ ಪೆರರ
ದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ || 199 ||
ನಮ್ಮ ಮನಸ್ಸಿನ ಆಟಗಳು ವಿಚಿತ್ರವಾಗಿರುತ್ತದೆ. ಕಷ್ಟಪಟ್ಟು ಅಧ್ಯಯನ ಮಾಡಿ ಒಂದು ಪದವಿ ಹಾಗೂ ನಂತರ ಕೆಲಸವನ್ನು ಪಡೆಯುವುದು ಮಾತ್ರ ಮೊದಲು ನಮ್ಮ ಧ್ಯೇಯವಾಗಿರುತ್ತದೆ. ಆದರೆ ಕೆಲಸ ಸಿಕ್ಕಿದಮೇಲೆ ಜೀವನದಲ್ಲಿ ನಾನಾ ರೀತಿಯ ಬದಲಾವಣೆ ಗಳು ಬರುತ್ತವೆ. ಇದ್ದ ಮನೆ ಚಿಕ್ಕದೆಂದು, ಇರುವ ವಾಹನ ಸಾಲದೆಂದು ಮನಸ್ಸು ವಿಚಾರ ಮಾಡುತ್ತದೆ. ಇಲ್ಲಿಂದ ಪ್ರಾರಂಭ ನಮ್ಮ ಸಂಸಾರ. ಜೀವನದಲ್ಲಿ ನನಗೇನು ಬೇಕು ಎಂಬುದನ್ನು ಅರಿಯದಿದ್ದುದೇ ಮುಂದಿನ ಜೀವನಹೋರಾಟಕ್ಕೆ ಕಾರಣವಾಗುತ್ತದೆ. ನಮ್ಮ ಮನಸ್ಸೇ ಹೀಗೆ. ಇರುವುದನ್ನು ಮರೆತು ಇಲ್ಲದ್ದನ್ನು ನೆನೆದು ದುಃಖಿಸುತ್ತಿರುತ್ತದೆ.
ಕವಿ ಗೋಪಾಲಕಷ್ಣ ಅಡಿಗರು ತಮ್ಮ ‘ಯಾವ ಮೋಹನ ಮುರಳಿ ಕರೆಯಿತೋ’ ಪದ್ಯದಲ್ಲಿ ಮನಸ್ಸಿನ ಬಯಕೆಗಳನ್ನು ವಿವರಿಸುತ್ತಾರೆ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ ಎಂದು ವರ್ಣಿಸಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಸುಖ ಆನಂದ ಇದೆ ಎಂಬ ಭ್ರಮೆಯಲ್ಲಿ ಜೀವನವನ್ನು ಕಳೆಯುತ್ತಿರುತ್ತಾನೆ. ಎಷ್ಟು ವಿಚಿತ್ರ ನಮ್ಮ ಮನಸ್ಸು! ಇರುವುದು ಅದಕ್ಕೆ ಬೇಡ. ಇಲ್ಲದಿರುವುದು ಬೇಕು. ಇರುವುದು ದೂರಾದಾಗ ಮತ್ತೆ ಮನಸ್ಸು ಅದನ್ನು ಬಯಸುತ್ತದೆ. ನಮ್ಮ ವೇದ ಪುರಾಣ ಭಗವದ್ಗೀತೆಗಳು ಹಿಂದಿನಿಂದಲೂ ಈ ಮನಸ್ಸಿಗೆ ಉಪದೇಶವನ್ನು ನೀಡುತ್ತಾ ಬಂದಿವೆ.
ಆದರೆ ಮನಸ್ಸನ್ನು ಹಿಡಿದು ತಿದ್ದುವವರು ಮಾತ್ರ ವಿರಳ. ಸಾಮಾನ್ಯರಾಗಿ ಹುಟ್ಟಿ ಸಾಮಾನ್ಯರಾಗಿ ಬೆಳೆದು ಸಾಮಾನ್ಯರಾಗಿ ಸಾಯುತ್ತೇವೆ. ಎಲ್ಲೋ ಕೆಲವರು ಮಾತ್ರ ಅಸಾಮಾನ್ಯರಾಗುತ್ತಾರೆ. ಕೃತಕೃತ್ಯರಾಗುತ್ತಾರೆ. ಮನಸ್ಸಿನ ಗೊಂದಲವನ್ನು ಗೆದ್ದು ನೆಲೆನಿಲ್ಲುತ್ತಾರೆ. ನಮ್ಮ ಶಾಸ್ತ್ರಗಳ, ಹಿಂದಿನವರ, ಅನುಭಾವಿಗಳ ಹಾಗೂ ವೇದಾಂತಿಗಳ ಉಪದೇಶವೂ ಇದೇ ಆಗಿದೆ.