ಮಳೆಗೆ ಕೆರೆಯಂತಾದ ರಸ್ತೆ.  
ನ್ಯೂಸ್

ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆ

Karthika K.S

ಪ್ರಮುಖ ಮುಖ್ಯಾಂಶಗಳು

  • ವಾಹನ ಸಂಚಾರಕ್ಕೆ ತೀವ್ರ ತೊಂದರೆ
  • ಗ್ರಾಮೀಣ ಭಾಗದ ರಸ್ತೆಯಲ್ಲಿ ಮಳೆ ನೀರಿನಿಂದ ಸಮಸ್ಯೆ
ಮೂಲ್ಕಿ: ಅನಿರೀಕ್ಷಿತವಾಗಿ ಕಳೆದ ಎರಡು ದಿನಗಳಿಂದ ಅಲ್ಪ ಸ್ವಲ್ಪ ಸುರಿದ ಮಳೆಗೆ ಗ್ರಾಮೀಣ ಪ್ರದೇಶದ ಜನರು ಕೃತಕ ನೆರೆಯ ಪರಿಣಾಮ ಸಮಸ್ಯೆಯಿಂದ ಹೈರಾಣಾಗಿದ್ದಾರೆ.
ಕಿಲ್ಪಾಡಿ ಹಾಗೂ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು ರಸ್ತೆಯ ನಡುವೆ ಕೃತಕ ಕೆರೆ ಸೃಷ್ಟಿಯಾಗಿದೆ.
ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೆ ಮೇಲ್ಸೇತುವೆಯಿಂದ ಕವಲೊಡೆಯುವ ಶಿಮಂತೂರು ದೇವಸ್ಥಾನದ ರಸ್ತೆ ಕಸ ಹಾಗೂ ಹೂಳಿನಿಂದ ತುಂಬಿ ನೀರುಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆಗಳ ಆಗರವಾಗಿದೆ. ಪ್ರತಿ ಮಳೆಗಾಲದಲ್ಲಿ ಈ ರಸ್ತೆಯ ಕೆಲ ಕಡೆಗಳಲ್ಲಿ ಕೃತಕ ನೆರೆ ಉಂಟಾಗುತ್ತಿದ್ದು ಸರಿಪಡಿಸಲು ಸಂಬಂಧಪಟ್ಟ ಆಡಳಿತ ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ತುಂಬಾ ನೀರು ನಿಂತಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.