ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಎಲ್ಲ ರಂಗಗಳಲ್ಲಿ ದಾಪುಗಾಲು ಇಡುತ್ತಿರುವ ನಡುವೆಯೇ, ಸಚಿವ ಸ್ಥಾನವನ್ನೂ ಪಡೆದುಕೊಂಡಿದೆ! ಹೌದು, ಎಐ ಮೂಲಕ ಆಡಳಿತ ನಡೆಸುವ ಸಚಿವರೊಬ್ಬರನ್ನು ನೇಮಿಸಿದ ಜಗತ್ತಿನ ಪ್ರಥಮ ದೇಶವೆಂಬ ಹೆಗ್ಗಳಿಕೆಗೆ ಆಲ್ಬೇನಿಯಾ ಪಾತ್ರವಾಗಿದೆ. ಆದರೆ, ಇದು ವ್ಯಕ್ತಿಯೊಬ್ಬರ ನೇಮಕವಲ್ಲ. ಎಐ ಮೂಲಕ ಕಾರ್ಯನಿರ್ವಹಿಸುವ ವರ್ಚುವಲ್ ಸಚಿವರ ನೇಮಕ ಇದಾಗಿದೆ. ಕೋಡ್ ಮತ್ತು ಪಿಕ್ಸೆಲ್ಗಳಿಂದ ಮಾಡಲಾಗಿರುವ ಈ ಎಐ ಸಚಿವೆಗೆ ‘ಡಯೆಲ್ಲಾ’ ಎಂದು ನಾಮಕರಣ ಮಾಡಲಾಗಿದೆ. ಅದು ಸರ್ಕಾರದ ಖರೀದಿಯ ಜವಾಬ್ದಾರಿಯನ್ನು ನಿರ್ವಹಿಸಲಿದೆ.
ದೇಶ ಒಂದಲ್ಲ ಒಂದು ದಿನ ಡಿಜಿಟಲ್ ಸಚಿವ ಅಥವಾ ಎಐ ಪ್ರಧಾನಿಯನ್ನು ಹೊಂದಲಿದೆ ಎಂದು ಆಲ್ಬೇನಿಯಾ ಪ್ರಧಾನಮಂತ್ರಿ ಎದಿ ರಾಮಾ ಈ ವರ್ಷದ ಆರಂಭದಲ್ಲಿ ಹೇಳಿದ್ದರು. ಆದರೆ, ಯುರೋಪ್ನ ಬಾಲ್ಕನ್ನ ಪರ್ಯåಯದ್ವೀಪ ದೇಶ ಇಷ್ಟು ಬೇಗ ಎಐ ಸಚಿವರನ್ನು ಪಡೆಯಲಿದೆ ಎಂದು ಯಾರೂ ಊಹಿಸಿರಲಿಲ್ಲ.
ಸೋಷಲಿಸ್ಟ್ ಪಕ್ಷದ ಸಭೆಯಲ್ಲಿ ಪರಿಚಯ: ಗುರುವಾರ ತಿರಾನಾದಲ್ಲಿ ನಡೆದ ಆಳುವ ಸೋಷಲಿಸ್ಟ್ ಪಕ್ಷದ ಸಭೆಯಲ್ಲಿ ಪ್ರಧಾನಿ ರಾಮಾ ಅವರು ‘ಡಯೆಲ್ಲಾ’ಳನ್ನು ಪರಿಚಯಿಸಿದರು. ಡಯೆಲ್ಲಾ ಸರ್ಕಾರದ ಏಕೈಕ ಮಾನವೇತರ ಸದಸ್ಯೆ ಎಂದು ಪ್ರಧಾನಿ ಹೇಳಿದರು. ‘ಡಯೆಲ್ಲಾ, ದೈಹಿಕವಾಗಿ ಹಾಜರಿರದ, ಆದರೆ ವರ್ಚುವಲ್ ಆಗಿ ಸೃಷ್ಟಿಸಲಾದ ಕೃತಕ ಬುದ್ಧಿಮತ್ತೆಯ ಪ್ರಥಮ ಸದಸ್ಯೆ’ ಎಂದು ಅವರು ಹೇಳಿದ್ದಾಗಿ ಪೊಲಿಟಿಕೊ.ಇಯು ವರದಿ ಮಾಡಿದೆ.
ಎಐ ಅವತಾರವಾದ ಡಯೆಲ್ಲಾ ಎಲ್ಲ ಸಾರ್ವಜನಿಕ ಟೆಂಡರ್ಗಳ ಮೌಲ್ಯಮಾಪನ ಮಾಡಿ ಸಾರ್ವಜನಿಕ ಟೆಂಡರ್ಗಳನ್ನು ನೀಡುತ್ತದೆ. ಖಾಸಗಿ ಕಂಪನಿಗಳಿಗೆ ಗುತ್ತಿಗೆ ಕೊಡುವ ಸಂದರ್ಭದಲ್ಲಿ ಡಯೆಲ್ಲಾ ಈ ಕಾರ್ಯವನ್ನು ನಿರ್ವಹಿಸುತ್ತದೆ. ಅಂದಹಾಗೆ, ದೇಶದ ಸೇವಾ ಪೋರ್ಟಲ್ ಮೂಲಕ ಡಯೆಲ್ಲಾ ಈಗಾಗಲೇ ಸೇವೆ ಸಲ್ಲಿಸುತ್ತಿದೆ. ಧ್ವನಿ ಕಮಾಂಡ್ಗಳ ಮೂಲಕ ಅದು ಆಡಳಿತಶಾಹಿಯ ಕೋರಿಕೆಗಳನ್ನು ಪರಿಷ್ಕರಿಸುತ್ತಿದೆ.
ಆಲ್ಬೇನಿಯಾದಲ್ಲಿ ಮಾದಕದ್ರವ್ಯ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುವ ಗುಂಪುಗಳು ಸಕ್ರಿಯವಾಗಿದ್ದು, ಇವುಗಳ ಕಬಂಧಬಾಹು ಸರ್ಕಾರದವರೆಗೂ ಚಾಚಿದೆ. ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಮೂಲಕ ಇದನ್ನು ನಿಯಂತ್ರಿಸುವುದೂ ಸರ್ಕಾರದ ಉದ್ದೇಶ.
ಸರ್ಕಾರದ ಕ್ರಮಕ್ಕೆ ವಿರೋಧ, ಅಪಸ್ವರಗಳೂ ವ್ಯಕ್ತವಾಗಿವೆ. ಕೃತಕ ಬುದ್ಧಿಮತ್ತೆಯನ್ನೇ ಯಾಮಾರಿಸುವ ಸಾಧ್ಯತೆಯೂ ಇದೆ ಎಂಬುದು ಕೆಲವರ ವಾದ. ‘ಇದರಿಂದ ಭಾರಿ ಬದಲಾವಣೆ ಏನೂ ಆಗುವುದಿಲ್ಲ. ಭ್ರಷ್ಟಾಚಾರ ಮುಂದುವರಿಯುತ್ತದೆ. ಆದರೆ ಅದರ ಹೊಣೆಯನ್ನು ಡಿಯೆಲ್ಲಾ ತಲೆಗೆ ಕಟ್ಟಲಾಗುತ್ತದೆಯಷ್ಟೆ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.