ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸರು ಅಡ್ಡಗಟ್ಟಿ ಕಿರಿಕಿರಿ ಮಾಡುವುದಿಲ್ಲ. ಹಾಗಂತ ದಂಡ ವಿಧಿಸುವುದಿಲ್ಲ ಎಂದರ್ಥವಲ್ಲ. ಬದಲಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿಕೊಂಡು ಸ್ಮಾರ್ಟ್ ಆಗಿ ದಂಡ ವಿಧಿಸಿ ವಾಹನ ಮಾಲೀಕರ ಮೊಬೈಲ್‌ಗೆ ಇನ್ನುಮುಂದೆ ಸ್ವಯಂಚಾಲಿತವಾಗಿ ಇ-ಚಲನ್ ಬರಲಿದೆ.
ಹೌದು... ಇಂತಹದೊಂದು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂಗೆ (ಐಟಿಎಂಎಸ್) ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದು, ಇದು ಸಂಚಾರ ನಿಯಮ ಉಲ್ಲಂಘನೆಗೆ ಸಂಪರ್ಕ ರಹಿತ ಸ್ವಯಂಚಾಲಿತ ದಂಡ ವಿಧಿಸುವ ವ್ಯವಸ್ಥೆಯಾಗಿದೆ.
ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಒಳಗೊಂಡ 250 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಕ್ಯಾಮರಾಗಳು ಮತ್ತು 80 ರೆಡ್‌ಲೈಟ್ ವಯೋಲೇಷನ್ ಡಿಟೆಕ್ಷನ್ (ಆರ್‌ಎಲ್‌ವಿಡಿ) ಕ್ಯಾಮರಾಗಳನ್ನು ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ.
ಈ ಕ್ಯಾಮರಾಗಳು ವೇಗ ಮಿತಿ, ಕೆಂಪು ದೀಪ, ಸ್ಟಾಪ್ ಲೇನ್, ಹೆಲ್ಮೆಟ್ ರಹಿತ, ತ್ರಿಬಲ್ ರೈಡಿಂಗ್, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮತ್ತು ಸೀಟ್ ಬೆಲ್ಟ್ ಉಲ್ಲಂಘನೆಗಳನ್ನು ಸ್ವಯಂ ಚಾಲಿತವಾಗಿ ಗುರುತಿಸಲಿವೆ. ವಾಹನದ ನಂಬರ್ ಪ್ಲೇಟ್ ಗುರುತಿಸಿ ವಾರಸುದಾರರ ಮೊಬೈಲ್ ನಂಬರ್‌ಗೆ ಎಸ್‌ಎಂಎಸ್‌ನಲ್ಲಿ ಇ-ಚಲನ್ ಹೋಗಲಿದೆ.
ಐಟಿಎಂಎಸ್ ವ್ಯವಸ್ಥೆ ಸಂಪೂರ್ಣವಾಗಿ ಸ್ವಯಂಚಾಲತವಾಗಿದ್ದು, ಎಲ್ಲ ಕ್ಯಾಮರಾಗಳು ದಿನದ 24 ಗಂಟೆಗಳ ಕಾಲ 365 ದಿನಗಳು ಕಾರ್ಯನಿರ್ವಹಿಸಲಿವೆ. ಇದರಿಂದ ಸಂಚಾರ ಪೊಲೀಸರ ಮೇಲಿನ ಒತ್ತಡ ಕಡಿಮೆ ಆಗಲಿದೆ. ಸಂಚಾರ ನಿಯಂತ್ರಣ, ನಿರ್ವಹಣೆ ಮತ್ತು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳಲು ಅನುಕೂಲವಾಗಲಿದೆ.
ಮತ್ತೊಂದೆಡೆ ಪರಿಣಾಮಕಾರಿ ನಿಯಮಗಳು ಜಾರಿಯಾಗಿರುವುದರಿಂದ ರಸ್ತೆಗಳಲ್ಲಿ ಶಿಸ್ತು ಪಾಲನೆ, ಅಪಘಾತಗಳಲ್ಲಿ ಇಳಿಮುಖ, ರಸ್ತೆ ಸುರಕ್ಷತೆ ಹೆಚ್ಚುತ್ತದೆ. ಬೆಂಗಳೂರು ನಗರ ರಸ್ತೆಗಳು ಸುರಕ್ಷಿತ ಎಂಬ ಧೈರ್ಯ ಜನರಲ್ಲಿ ಬರಲಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಜತೆ ಟ್ರಾಫಿಕ್ ಪೊಲೀಸರು ವಾಗ್ವಾದ, ಜಗಳ ಮತ್ತು ವಾಹನ ಚಾಲಕ/ಸವಾರರಿಗೂ ಸಮಯ ವ್ಯರ್ಥ ತಪ್ಪಲಿದೆ. ಸಾಕ್ಷ್ಯ ಸಮೇತ ದಂಡ ವಿಧಿಸಿದಾಗ ತಪ್ಪು ಒಪ್ಪಿಕೊಂಡು ದಂಡ ಪಾವತಿ ಮಾಡಲೇ ಬೇಕಾಗಿದೆ. ಪಾರದರ್ಶಕತೆ ಸಹ ಬರಲಿದೆ.
ಬೆಂಗಳೂರು ನಗರದ ಬಹುತೇಕ ಜಂಕ್ಷನ್‌ಗಳಲ್ಲಿ ಎಎನ್‌ಪಿಆರ್ 250 ಕ್ಯಾಮರಾ ಹಾಗೂ ಆರ್‌ಎಲ್‌ವಿಡಿ 50 ಕ್ಯಾಮರಾಗಳು ಅಳವಡಿಸಲಾಗಿದೆ. ಕ್ಯಾಮರಾಗಳ ಕಣ್ಣುತಪ್ಪಿಸಿ ವಾಹನ ಚಾಲನೆ ಕಷ್ಟ. ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಕೆಲವೇ ನಿಮಿಷದಲ್ಲಿ ವಾಹನ ವಾರಸುದಾರನ ಮೊಬೈಲ್‌ಗೆ ಇ-ಚಲನ್ ಒಳಗೊಂಡ ಲಿಂಕ್ ಬರಲಿದೆ. ಅದರಲ್ಲಿ ಫೋಟೋ ಮತ್ತು 5 ಸೆಕೆಂಡ್ ವಿಡಿಯೋ ಇರಲಿದೆ.